‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕೃಷಿ ಅಭಿಯಾನ
ಮಡಿಕೇರಿ, ಜೂ.22: ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಹೆಸರಿನಡಿ ಕೃಷಿ ಅಭಿಯಾನ ಕಾರ್ಯಕ್ರಮ ಆಯೋಜಿಸುವ ಕುರಿತು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಪ್ಪ ಮಾತನಾಡಿ, ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು, ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆಯನ್ನು ಪಡೆಯುವುದು ಅತ್ಯವಶ್ಯಕವಾಗಿದೆ. ಇದಕ್ಕಾಗಿ ಕೃಷಿ, ತೋಟಗಾರಿಕೆಯೊಂದಿಗೆ ಪೂರಕ ಉಪ ಕಸುಬುಗಳಾದ ಪಶುಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳನ್ನು ರೈತರು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಜಾಗೃತಿ ಮೂಡಿಸಲು ಮೂರು ದಿನಗಳ ಕಾಲ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಹೆಸರಿನಡಿ ಕೃಷಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೃಷಿ ವಲಯದ ಪ್ರಸ್ತುತ ಪರಿಸ್ಥಿತಿ ಅರಿತು, ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಿಸುವುದು, ಏಕಗವಾಕ್ಷಿ ವಿಸ್ತರಣಾ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ಒದಗಿಸಿ ವಿವಿಧ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮ ಕೃಷಿ ಅಭಿಯಾನದ ಉದ್ದೇಶವಾಗಿದೆ ಎಂದು ರಾಮಪ್ಪ ತಿಳಿಸಿದರು. ಕೃಷಿ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು. ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ, ವಿಜ್ಞಾನಿಗಳೊಂದಿಗೆ ರೈತರ ಸಂವಾದ, ಜೊತೆಗೆ ಕೃಷಿ ಅಭಿಯಾನ ಸಮಗ್ರ ಕೃಷಿ ಮಾಹಿತಿ ಘಟಕ, ಕೃಷಿ ವಸ್ತು ಪ್ರದರ್ಶನ ಮತ್ತು ರೈತ ಸಂವಾದ ಈ ಮೂರು ಪ್ರಮುಖ ಘಟಕಗಳನ್ನೊಳಗೊಂಡಿದೆ ಎಂದರು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಜನಸಂಖ್ಯೆಗೆ ತಕ್ಕಂತೆ ಆಹಾರ ಉತ್ಪಾದನೆಯಾಗುತ್ತಿಲ್ಲ. ಆಹಾರ ಉತ್ಪಾದನೆಯಲ್ಲಿ ಶೇ.20ರಷ್ಟನ್ನಾದರೂ ಹೆಚ್ಚಳ ಮಾಡಬೇಕು. ಈ ಬಗ್ಗೆ ಅವಲೋಕನ ಮಾಡಬೇಕಿದೆ ಎಂದು ಹೇಳಿದರು. ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ನಾಗರಾಜು, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಟಿ.ದರ್ಶನ್ ಹಲವು ಮಾಹಿತಿ ನೀಡಿದರು.
ಡಿಡಿಪಿಐ ಬಸವರಾಜು, ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.