ಸೋಮವಾರಪೇಟೆಯಲ್ಲಿ ಅಮಾಯಕರ ಬಂಧನ
ಮಡಿಕೇರಿ, ಜೂ.22: ಸೋಮವಾರಪೇಟೆಯಲ್ಲಿ ಜೂ.19ರಂದು ಮೋಹನ್ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಶಾಂತಿ ಕದಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎ.ಹಾರಿಸ್, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ಅವರ ಸಹೋದರ ಸಂತೋಷ್ ಪೂರ್ವಾಗ್ರಹ ಪೀಡಿತರಾಗಿ ಅಮಾಯಕ ಯುವಕರ ವಿರುದ್ಧ ಸುಳ್ಳು ದೂರನ್ನು ನೀಡಿದ್ದಾರೆ. ಪೊಲೀಸರು ಕೂಡ ಯಾವುದೇ ತನಿಖೆ ನಡೆಸದೆ ಅಮಾಯಕ ಯುವಕರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದರು.
ಈಗ ರಮಝಾನ್ ತಿಂಗಳಾಗಿರುವುದರಿಂದ ಸಂಜೆ 7ರಿಂದ ರಾತ್ರಿ 10:30ರವರೆಗೆ ಇಫ್ತಾರ್ ಹಾಗೂ ರಾತ್ರಿಯ ಪ್ರಾರ್ಥನೆಗಾಗಿ ಮುಸಲ್ಮಾನರು ಮಸೀದಿಯಲ್ಲಿರುತ್ತಾರೆ. ಬಂಧಿಸಲ್ಪಟ್ಟಿರುವ ಯುವಕರು ಕೂಡ ರಾತ್ರಿ 10:30ರವರೆಗೆ ಮಸೀದಿಯಲ್ಲೇ ಇದ್ದರು ಎನ್ನುವುದಕ್ಕೆ ಪ್ರತ್ಯಕ್ಷದರ್ಶಿಗಳೇ ಸಾಕ್ಷಿಯಾಗಿದ್ದಾರೆ. ಆದರೂ ರಾತ್ರಿ 12 ಗಂಟೆಗೆ ಸುಮಾರಿಗೆ ಮನೆಯಲ್ಲಿದ್ದ ಯುವಕರನ್ನು ಬಂಧಿಸಲಾಗಿದೆ. ಸೋಮವಾರಪೇಟೆಯಲ್ಲಿ ಮುಸ್ಲಿಮ್ ಯುವಕರ ಮೇಲೆ ವಿನಾಕಾರಣ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದ್ದು, ಅವರ ವ್ಯಾಪಾರ ವಹಿವಾಟುಗಳನ್ನು ಕುಂಠಿತ ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕೋಮು ಭಾವನೆ ಮೂಡಿಸಲು ಕೆಲವೊಂದು ಸಂಘಟನೆ ಮತ್ತು ರಾಜಕೀಯ ನಾಯಕರು ಪ್ರಯತ್ನಿಸುತ್ತಿದ್ದು, ಇವರ ಒತ್ತಡಕ್ಕೆ ಮಣಿದ ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ ಎಂದು ಹಾರಿಸ್ ಆರೋಪಿಸಿದರು.
ಘಟನೆಯ ದಿನ ರಾತ್ರಿ ಕೆಲವೊಂದು ಅಮಾಯಕ ಯುವಕರ ಮನೆಗೆ ತೆರಳಿದ ಕೆಲವರು ಮನೆಯಲ್ಲಿದ್ದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಮತ್ತು ಕಾರುಗಳನ್ನು ಧ್ವಂಸ ಮಾಡಿದ್ದಾರೆ. ವರ್ಕ್ ಶಾಪಿನಲ್ಲಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಶಾಂತಿಯುತ ಸೋಮವಾರಪೇಟೆ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ ಅವರು ಶಾಂತಿ ಕದಡಲು ಪ್ರಯತ್ನಿಸುತ್ತಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.
ಹಲ್ಲೆಗೊಳಗಾದ ಮೋಹನ್, ವೈಯಕ್ತಿಕವಾಗಿ ಹಲವರ ದ್ವೇಷವನ್ನು ಕಟ್ಟಿಕೊಂಡಿದ್ದು, ಕಳೆದ 2-3 ತಿಂಗಳಿನಿಂದ ಕೆಲವು ಅಹಿತಕರ ಘಟನೆಗಳು ನಡೆದಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿದಾಗ ಮಾತ್ರ ನೈಜ್ಯ ಆರೋಪಿಗಳನ್ನು ಬಂಧಿಸಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.
ಬಂಧಿತರಲ್ಲಿ ಒಬ್ಬರು ಬಾಲ ಆರೋಪಿಯಾಗಿದ್ದು, ಇವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದರೂ ಅದಕ್ಕೆ ಸಂಬಂಧಿಸಿದವರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಲಯಾಧ್ಯಕ್ಷ ಜುನೈದ್, ಕಾರ್ಯದರ್ಶಿ ಇಸ್ಮಾಯೀಲ್ ಹಾಗೂ ಸದಸ್ಯ ಕಬೀರ್ ಉಪಸ್ಥಿತರಿದ್ದರು.