ವೀರಾಜಪೇಟೆ: ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ
ವೀರಾಜಪೇಟೆ, ಜೂ.22: ರಾಷ್ಟ್ರೀಯ ಬ್ಯಾಂಕ್‌ಗಳು ಕಿರುಕುಳ ನೀಡುತ್ತಾ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ. ಇಂತಹ ಬ್ಯಾಂಕ್‌ಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ ಎಂದು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು.
ಭಾರತೀಯ ಸ್ಟೇಟ್‌ಬ್ಯಾಂಕ್‌ನ ವೀರಾಜಪೇಟೆ ಶಾಖೆಯ ಮುಂದೆ ರೈತರ ಪರವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿ, 2002ರಲ್ಲಿ ಬಾಳೆಲೆ ನಿಟ್ಟೂರು ಗ್ರಾಮದ ಮಲ್ಚಿರ ತಮ್ಮಯ್ಯ ಎಂಬವರು ವೀರಾಜಪೇಟೆ ಎಸ್‌ಬಿಐ ಶಾಖೆಯಿಂದ ಕಾಫಿ ತೋಟ ಅಡವಿಟ್ಟು 10 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಮೇ 2016ಕ್ಕೆ ಬಡಿ,್ಡ ಸುಸ್ತಿ ಬಡ್ಡಿ ಸೇರಿ 69.82 ಸಾವಿರ ರೂ.ಗಳಾಗಿವೆೆ. ಈ ವಿಚಾರದಲ್ಲಿ ವಾದವಿವಾದಗಳು ನಡೆದು ನ್ಯಾಯಾಲಯದ ಮೆಟ್ಟಿಲೇರಿತ್ತು. ಸುಸ್ತಿದಾರರಿಗೆ ವಾದ ನಡೆಸಲು ಪೂರ್ಣ ಅವಕಾಶ ನೀಡದ ಕಾರಣ ಸಾಲ ವಸೂಲಾತಿ ನ್ಯಾಯಾಧಿಕರಣವು ಬ್ಯಾಂಕ್‌ನ ಪರವಾಗಿ ಆದೇಶ ಹೊರಡಿಸಿದೆ. ಇದನ್ನು ನಾವು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಖಂಡಿಸುವುದಾಗಿ ತಿಳಿಸಿದರು.
ಹೆಚ್ಚಾಗುತ್ತಿರುವ ಕೃಷಿ ವೆಚ್ಚಗಳು, ಹವಾಮಾನ ವೈಪರಿತ್ಯ, ಸರಕಾರದಿಂದ ಸರಿಯಾದ ಬೆಂಬಲ ಬೆಲೆ ಹಾಗೂ ವೈಜ್ಞಾನಿಕವಾಗಿ ಬೆಲೆ ನಿಗದಿಯಾಗದಿರುವುದು ಮುಂತಾದ ಕಾರಣಗಳಿಂದ ಕೃಷಿಕರಿಗೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಈಗಲು ಸಮಯಾವಕಾಶ ಕೊಟ್ಟರೆ ಅಸಲಿನ ಮೊತ್ತವನ್ನು ಮರು ಪಾವತಿಸಬಹುದು. ಬ್ಯಾಂಕ್‌ನವರು ಜೂ. 24ರಂದು ಇ ಹರಾಜಿನ ಮೂಲಕ ಆಸ್ತಿಯನ್ನು ಮಾರಾಟ ಮಾಡುವುದನ್ನು ರದ್ದು ಗೊಳಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ಪ್ರಾಂತ ರೈತ ಸಂಘದ ಅಧ್ಯಕ್ಷ ಅಶ್ವಥ್ ನಾರಾಯಣ್ ಅರಸ್ ಮಾತನಾಡಿ, ದೇಶದಲ್ಲಿ ನಿಜವಾಗಿ ಉಳಿಯಬೇಕಾದವರು ಜವಾನ್ ಹಾಗೂ ಕಿಸಾನ್. ರಾಜಕಾರಣಿಗಳು ಜಾತಿ ಲೆಕ್ಕಾಚಾರ, ಹೆಂಡ, ಹಣ ಹಂಚಿ ಮತ ಹಾಕಿಸಿಕೊಂಡು ರೈತರನ್ನು ಬೀದಿಗೆ ತಳ್ಳುತ್ತಿದ್ದಾರೆ. ಅಧಿಕಾರಿಗಳು ಹವಾನಿಯಂತ್ರಿತ ಕೋಣೆಯಲ್ಲಿ ವಿರಮಿಸುತ್ತಿದ್ದರೆ, ರೈತರು ಬ್ಯಾಂಕ್‌ಗಳಿಗೆ ಸಾಲ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಅರ್ಧ ಬೆಲೆಗೆ ತೆಗೆದುಕೊಂಡು ರೈತರನ್ನು ಅವಸಾನದ ಅಂಚಿಗೆ ತಳ್ಳುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆ ನಡೆಯವ ಸ್ಥಳಕ್ಕೆ ಬ್ಯಾಂಕ್‌ನ ವ್ಯವಸ್ಥಾಪಕ ಆಗಮಿಸಿ, ಬ್ಯಾಂಕ್‌ನ ವ್ಯವಹಾರಗಳನ್ನು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ. ಕೆಲವು ಜನರು ಬಂದು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತ ಸಂಘದ ಮುಖಂಡರು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಪ್ರತಿಭಟನೆಯಲ್ಲಿ ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ್ ನಾಚಪ್ಪ, ರೈತ ಸಂಘದ ಖಾಜಾಂಚಿ ಮಾಣಿರ ವಿಜಯ್ ನಂಜಪ್ಪ, ಚಿಮ್ಮಂಗಡ ಗಣೇಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ವೃತ್ತ ನಿರೀಕ್ಷಕ ಶಾಂತ ಮಲ್ಲಪ್ಪಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬ್ಯಾಂಕ್‌ಗಳು ಎಲ್ಲ ವ್ಯವಹಾರವನ್ನು ಕಾನೂನು ರೀತಿಯಲ್ಲಿ ನಡೆಸುತ್ತಿದೆ. ನನ್ನ ಪರಿಮಿತಿಯಲ್ಲಿ ಆಗುವುದನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸೌಹಾರ್ದಯುತವಾಗಿ ಬಗೆಹರಿಸಲು ಸಿದ್ಧ್ದರಿದ್ದೇವೆ. ಎಲ್ಲವನ್ನು ಮಾತುಕತೆಯ ಮೂಲಕ ಬಗೆಹರಿಸಬಹುದುಂದು ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಖಾದ್ರಿ ಗುಂಡೂರಾವ್ ರೈತ ಮುಖಂಡರಿಗೆ ಭರವಸೆ ನೀಡಿದರು.