×
Ad

ಕಾರವಾರ: ಕೇಂದ್ರ ಕಾರಾಗೃಹ ಸ್ಥಳಾಂತರಕ್ಕೆ ವಿರೋಧ

Update: 2016-06-22 23:21 IST

ಕಾರವಾರ, ಜೂ.22: ನಗರದಲ್ಲಿರುವ ಕೇಂದ್ರ ಕಾರಾಗೃಹವನ್ನು ತಾಲೂಕಿನ ಕಣಸಗಿರಿಗೆ ಸ್ಥಳಾಂತರಿಸಲು ಉದ್ದೇಶಿಸಿರುವುದು ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗಿದೆ. ಕಣಸಗಿರಿಯ ಮಹಾದೇವ ದೇವಸ್ಥಾನ ಆವರಣದಲ್ಲಿ ಈ ಬಗ್ಗೆ ಸಭೆ ಸೇರಿದ ಗ್ರಾಮದ ಪ್ರಮುಖರು ಕಾರಾಗೃಹ ನಿರ್ಮಾಣದಿಂದಾಗುವ ತೊಡಕುಗಳ ಕುರಿತು ಚರ್ಚೆ ನಡೆಸಿದರು. ನಗರದಲ್ಲಿರುವ ಕಾರಾಗೃಹವನ್ನು ಕಣಸಗಿರಿಯ ಸರ್ವೇ ನಂ.95ರಲ್ಲಿ ನಿರ್ಮಿಸಿದಲ್ಲಿ ಪುರಾತನ ಭೂಮಿ ಹಾಗೂ ಸಮೀಪ ಇರುವ ಸ್ಮಶಾನಕ್ಕೆ ಧಕ್ಕೆ ಉಂಟಾಗುತ್ತದೆ. ಬ್ರಿಟಿಷ್ ಕಾಲದಲ್ಲಿ ಜಾನುವಾರುಗಳ ಮೇವಿಗಾಗಿ ನೀಡಲ್ಪಟ್ಟ ಭೂಮಿ ಹಾಳಾಗುತ್ತದೆ. ಕೃಷಿಕರ ಜಮೀನುಗಳಿಗೆ ಕೂಡ ಹಾನಿ ಉಂಟಾಗಲಿದೆ. ಈ ಭಾಗದಲ್ಲಿರುವ ಮುಖ್ಯರಸ್ತೆಯಿಂದ ಒಳಹೋಗಲು ಸ್ವಂತ ರಸ್ತೆ ನಿರ್ಮಿಸಿಕೊಂಡಿದ್ದು, ಕಾರಾಗೃಹ ನಿರ್ಮಾಣದ ನಂತರ ಮಾಲ್ಕಿ ಜಮೀನುಗಳಿಗೆ ಅಧಿಕ ಹಾನಿ ಉಂಟಾಗುತ್ತದೆ. ಊರಿನವರು ನಿರ್ಮಿಸಿದ ರಸ್ತೆಯೂ ಹಾಳಾಗಲಿದೆ. ದನದ ಕೊಟ್ಟಿಗೆ ಹಾಗೂ ಸುತ್ತಲಿನ ಹಲವು ಮನೆಗಳನ್ನು ನೆಲಸಮ ಮಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮದ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಈ ಕಾರಾಗೃಹ ನಿರ್ಮಿಸಲು ಅವಕಾಶ ನೀಡಬಾರದೆಂಬ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಯಿತು. ಹಾಗಾಗಿ ಈಗಾಗಲೇ ಗುರುತಿಸಿದ ಜಾಗದಲ್ಲಿ ಕಾರಾಗೃಹ ನಿರ್ಮಿಸಲು ಅವಕಾಶ ನೀಡದಂತೆ ತಡೆಯಲು ಹೋರಾಟ ಸಮಿತಿ ಅಸ್ತಿತ್ವಕ್ಕೆ ತರುವ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಗ್ರಾಪಂ ಸದಸ್ಯ ಧೀರಜ್ ಸಾವಂತ, ರಾಜೇಂದ್ರ ನಾಯ್ಕ, ಊರ ನಾಗರಿಕರಾದ ರಾಮದಾಸ ನಾಯ್ಕ, ಸಂತೋಷ ನಾಯ್ಕ, ಶರದ್ ನಾಯ್ಕ, ಸಚಿನ್ ರಾಣೆ, ಜಯರಾಜ ರಾಣೆ, ಸುಧಾಕರ್ ಶೇಟ್ಕರ್, ಬಿಕಾಜಿ ಶಿರೋಡಕರ್, ದೀಪಕ್ ನಾಯ್ಕ, ಮಹೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News