×
Ad

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕಿದೆ: ಮಹೇಶ್

Update: 2016-06-22 23:28 IST

ಕಡೂರು, ಜೂ.22: ಶಿಕ್ಷಣದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗಿಯಾಗಬೇಕಿದೆ. ಇದರಿಂದ ತಮ್ಮ ಪ್ರತಿಭೆ ಹೆಚ್ಚಿಸಿಕೊಳ್ಳಬಹುದಾಗಿದೆ. ಸರಕಾರಿ ಶಾಲೆಗಳಲ್ಲಿ ಪಠ್ಯದಲ್ಲಿ ಇರುವುದನ್ನು ಮಾತ್ರ ಬೋಧಿಸಲು ಅವಕಾಶವಿರುತ್ತದೆ. ಶಿಕ್ಷಕರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕಿದೆ ಎಂದು ಜಿಪಂ ಸದಸ್ಯ ಮಹೇಶ್ ಒಡೆಯರ್ ತಿಳಿಸಿದರು.

  ಅವರು ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ನಾಡಿನ ಪ್ರಸಿದ್ಧ ಕವಿಗಳ ಭಾವಗೀತೆ ಕಲಿಕಾ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಾಹಿತ್ಯ ಸಂಬಂಧಿಸಿದಂತೆ ಸರಕಾರವೇ ರೂಪಿಸಿರುವ ಕಾರ್ಯಕ್ರಮವಾಗಿದೆ. ಇದರ ಸದುಪಯೋಗ ಮಕ್ಕಳಿಗೆ ದೊರೆಯಬೇಕಿದೆ. ಅಂಗನವಾಡಿಯಲ್ಲಿ ಕಲಿತ ಮಕ್ಕಳಿಗೆ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಮಟ್ಟದ ವಿದ್ಯಾಭ್ಯಾಸವನ್ನು ಮಕ್ಕಳ ಮನೆ ಎಂಬ ಹೆಸರಿನಿಂದ ಸರಕಾರದ ವತಿಯಿಂದ ನೀಡಲಾಗುತ್ತಿದೆೆ. ಇದು ಪ್ರಾಯೋಗಿಕವಾಗಿ ನಮ್ಮ ತಾಲೂಕಿನಲ್ಲಿ ನಡೆಸಲಾಗುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಇದನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.

ಪೋಷಕರಲ್ಲಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ವ್ಯಾಮೋಹ ಹೆಚ್ಚಾಗಿದ್ದು, ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪೋಷಕರು ಇದೇ ಪ್ರವೃತ್ತಿಯನ್ನು ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳೇ ಇಲ್ಲದಂತಾಗುವುದು ಖಚಿತ. ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳನ್ನು ತಿದ್ದುವ ಕೆಲಸ ಶಿಕ್ಷಕರದ್ದಾಗಿದೆ. ಗುಣಾತ್ಮಕವಾಗಿ ಮಕ್ಕಳು ಬೆಳೆಯಲು ಇಂತಹ ಸಾಹಿತ್ಯ, ಜಾನಪದ, ಭಾವಗೀತೆ, ಕಲಿಕಾ ಕಾರ್ಯಕ್ರಮಗಳ ಅಗತ್ಯಯಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಮಾತನಾಡಿ, ಸರಕಾರದ 10 ಅಂಶಗಳ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಕಲಿಕಾ ಕಾರ್ಯಕ್ರಮವು ಒಂದಾಗಿದ್ದು, ಪಠ್ಯೇತರ ಚಟುವಟಿಕೆಗಳಿಂದಾಗಿ ಪ್ರತಿಭೆಗಳು ಹೊರಹೊಮ್ಮಲು ಅವಕಾಶವಿರುತ್ತದೆ. ಮಕ್ಕಳ ಶಿಕ್ಷಣಕ್ಕಾಗಿ ಸರಕಾರ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಎಚ್.ಎಲ್. ದತ್ತುರವರು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಸ್ಥಾನಕ್ಕೇರಿದವರು. ಇವರ ಹೆಸರಿನಲ್ಲಿ ಸರಕಾರ 75 ಲಕ್ಷ ರೂ. ವೌಲ್ಯದ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ನಡೆಸುತ್ತಿದೆ ಎಂದರು. ಭಾವಗೀತೆ ಕಲಿಕಾ ಮುಖ್ಯಸ್ಥ ಮಲ್ಲಿಗೆ ಸುಧೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಭಾಗ್ಯಾ, ವಾಸುದೇವಮೂರ್ತಿ, ಶಿವಮೂರ್ತಿ, ಶಿಕ್ಷಕಿ ಶೋಭಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News