×
Ad

ಸರಕಾರಿ ಜಾಗದಲ್ಲಿ ಖಾಸಗಿ ಶಾಲೆ ನಿರ್ಮಾಣ ಆರೋಪ

Update: 2016-06-22 23:34 IST

ಶಿವಮೊಗ್ಗ, ಜೂ. 22: ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಯಡೇಹಳ್ಳಿ ಗ್ರಾಮದ ಸರಕಾರಿ ಜಮೀನಿನಲ್ಲಿ ಖಾಸಗಿ ಶಾಲೆಯೊಂದರ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಬುಧವಾರ ಯಡೇಹಳ್ಳಿ ಗ್ರಾಮಸ್ಥರು ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಗ್ರಾಮದ ಸರ್ವೇ ನಂಬರ್ 22 ರಲ್ಲಿ ಅಂದಾಜು 1 ಎಕರೆ 20 ಗುಂಟೆ ಸರಕಾರಿ ಜಮೀನಿದೆ. ಇತ್ತೀಚೆಗೆ ಈ ಜಮೀನನ್ನು ಅತಿಕ್ರಮಿಸಿಕೊಂಡು ಖಾಸಗಿ ಶಾಲೆಯೊಂದರ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ. ಸರಕಾರಿ ಸ್ಥಳದಲ್ಲಿ ಸುತ್ತಲು ತಂತಿ ಬೇಲಿ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಸರಕಾರಿ ಜಮೀನಿನ ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಈ ವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡುವ ಗೋಜಿಗೂ ಹೋಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಯಡೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡೇಹಳ್ಳಿ ಕ್ಯಾಂಪ್, ಅಶೋಕನಗರ, ದೊಡ್ಡಸೀಗೆ, ಚಂದನಕೆರೆ, ಹೊಸೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಸತಿರಹಿತ ಬಡವರ ಸಂಖ್ಯೆ ಹೆಚ್ಚಿದೆ. ಕಳೆದ 20 - 30 ವರ್ಷಗಳಿಂದ ಸ್ವಂತ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಯಡೇಹಳ್ಳಿ ಹಾಗೂ ಅಶೋಕ ನಗರ ಗ್ರಾಮಗಳಲ್ಲಿ ರಾಷ್ಟ್ರೀಯ ಹೆದ್ದಾರಿ 13 ರ ವಿಸ್ತರಣೆಗೆ ಹಲವು ಮನೆಗಳು ತೆರವುಗೊಳ್ಳಲಿವೆ ಎಂದರು.

 ಈ ಹಿನ್ನೆಲೆಯಲ್ಲಿ ಸರ್ವೇ ನಂಬರ್ 22 ರಲ್ಲಿರುವ 1 ಎಕರೆ 20 ಗುಂಟೆ ಸರಕಾರಿ ಜಾಗದಲ್ಲಿ ವಸತಿರಹಿತರಿಗೆ ನಿವೇಶನ ಕಲ್ಪಿಸಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ಪ್ರಸ್ತುತ ಈ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿರುವ ಖಾಸಗಿ ಶಾಲೆಯ ಕಟ್ಟಡವನ್ನು ತೆರವುಗೊಳಿಸಿ ಜಮೀನು ಸಂರಕ್ಷಣೆ ಮಾಡುವ ಕೆಲಸಕ್ಕೆ ಅಧಿಕಾರಿಗಳು ಶೀಘ್ರ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಎಂ. ಬಸವರಾಜ್‌ವಹಿಸಿದ್ದರು. ಹಿತೇಶ್, ಇಬ್ರಾಹೀಂ, ಧನರಾಜ್, ಕಿರಣ್‌ಕುಮಾರ್ ಶೆಟ್ಟಿ, ಚೌಡಮ್ಮ, ರಾಮಣ್ಣ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News