ಕೆರೆ ಪ್ರದೇಶದಲ್ಲಿ ಕಟ್ಟಡ ನಿಮಾರ್ಣಕ್ಕೆ ಅವಕಾಶವಿಲ್ಲ: ಕೋಳಿವಾಡ
ಬೆಂಗಳೂರು, ಜೂ. 22: ಕೆರೆ ವ್ಯಾಪ್ತಿಯಲ್ಲಿನ ಬಫರ್ ರೆನ್‌ನಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುವುದಿಲ್ಲ. ಇದೀಗ ಆ ಪ್ರದೇಶದಲ್ಲಿ ತಲೆ ಎತ್ತಿರುವ ಕಟ್ಟಡಗಳ ತೆರವಿಗೂ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆರೆ ಒತ್ತುವರಿ ತೆರವು ಸದನ ಸಮಿತಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಒತ್ತಾಯಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆರೆ ವ್ಯಾಪ್ತಿಯಲ್ಲಿನ ಬಫರ್ ರೆನ್‌ನಲ್ಲಿ ಈಗಾಗಲೇ ಸಾಕಷ್ಟು ಕಟ್ಟಡಗಳು ತಲೆ ಎತ್ತಿದ್ದು, ಅವುಗಳನ್ನು ತೆರವುಗೊಳಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅರಕೆರೆ ಹಾಗೂ ಹುಳಿಮಾವು ಪ್ರದೇಶದಲ್ಲಿ ವಾಲ್‌ಮಾರ್ಟ್ ಕಂಪೆನಿ ಕೆರೆ ಒತ್ತುವರಿ ಮಾಡಿ 34 ವಸತಿ ಕಟ್ಟಡ ನಿರ್ಮಾಣ ಮಾಡಿತ್ತು. ಆ ಕಟ್ಟಡ ಬಫರ್ ರೆನ್ ವ್ಯಾಪ್ತಿಯಲ್ಲಿ ಬರುತ್ತಿದ್ದು, ಮನೆಗಳನ್ನು ವಿತರಣೆ ಮಾಡದಂತೆ ನೋಟಿಸ್ ನೀಡಲಾಗಿದೆ. ಆದರೂ, ಕಟ್ಟಡ ನಿರ್ಮಾಣ ಮಾಡಿದ್ದು, ತೆರವಿಗೆ ಆದೇಶ ನೀಡಲಾಗಿದೆ ಎಂದು ಹೇಳಿದರು.
ಜೂ.25ಕ್ಕೆ ಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸದನ ಸಮಿತಿ ಸದಸ್ಯರು ಹಾಗೂ ಸರಕಾರಿ ಅಧಿಕಾರಿಗಳ ಸಭೆ ಕರೆದಿದ್ದು, ಸಭೆ ನಡೆಸಲು ಈಗಾಗಲೇ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದ ಅವರು, ಕೆರೆಗಳ ಸಂರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ಐತಿಹಾಸಿಕ ವರದಿ: ಜು.4ರಿಂದ ವಿಧಾನಮಂಡಲದ ಅಧಿವೇಶನ ಸ್ಪೀಕರ್ ಎನ್.ಎಚ್.ಶಿವಶಂಕರ ರೆಡ್ಡಿ ನೇತೃತ್ವದಲ್ಲಿ ಆರಂಭವಾಗಲಿದ್ದು, ಅದೇ ದಿನ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದರೆ ಅಂದಿನಿಂದಲೇ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುತ್ತೇನೆ.
ಅಲ್ಲದೆ, ಸದನ ಸಮಿತಿ ಅಧ್ಯಕ್ಷ ಸ್ಥಾನದಲ್ಲಿಯೂ ಮುಂದುವರಿಯುವ ಮೂಲಕ ಕೆರೆಗಳ ಸಂರಕ್ಷಣೆ ದೃಷ್ಟಿಯಿಂದ ಒಂದು ಐತಿಹಾಸಿಕ ವರದಿ ನೀಡುವ ಇರಾದೆಯನ್ನು ಹೊಂದಿದ್ದೇನೆ ಎಂದು ಕೋಳಿವಾಡ ಇದೇ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.
ಸಚಿವ ಸಂಪುಟ ಪುನಾರಚನೆ ವೇಳೆ ಸ್ಥಾನ ಕೈತಪ್ಪಿದರೂ ಕಿಮ್ಮನೆ ರತ್ನಾಕರ ಎಲ್ಲರಿಗೂ ಮಾದರಿ ಯಾಗಿ ನಡೆದುಕೊಂಡಿದ್ದಾರೆ. ಆದರೆ, ಒಬ್ಬ ವ್ಯಕ್ತಿಗೂ ಮತ್ತೊಬ್ಬ ವ್ಯಕ್ತಿಗೂ ಭಿನ್ನತೆ ಇರುತ್ತದೆ. ಸಿಎಂ ನಡವಳಿಕೆಯ ಬಗ್ಗೆ ಅಂಬರೀಶ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲಾರೆ.
-ಕೆ.ಬಿ.ಕೋಳಿವಾಡ, ಕೆರೆ ಒತ್ತುವರಿ ಸದನ ಸಮಿತಿ ಅಧ್ಯಕ್ಷ