×
Ad

ಕಾರವಾರ: ಮಳೆಯಿಂದಾಗಿ ಗುಡ್ಡ ಕುಸಿಯುವ ಭೀತಿ

Update: 2016-06-23 19:01 IST

ಕಾರವಾರ, ಜೂ.23: ಉತ್ತರ ಕನ್ನಡ ಜಿಲ್ಲೆಯಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವವರು ಹೆಜ್ಜೆ ಹೆಜ್ಜೆಗೂ ಅಪಾಯ ಎದುರಿಸುವಂತಾಗಿದೆ ಎಂದು ಜನ ಆರೋಪಿಸಿದ್ದಾರೆ.

ಮಹಾರಾಷ್ಟ್ರದ ಪನ್ವೇಲ್‌ನಿಂದ ಕೇರಳದ ಕೊಚ್ಚಿಗೆ ಸಂಪರ್ಕಿಸುವ ಈ ಹೆದ್ದಾರಿ (ರಾ.ಹೆ.66)ಅನ್ನು ಚತುಷ್ಪಥಗೊಳಿಸುವ ಕಾಮಗಾರಿಯನ್ನು ಕಳೆದ 2 ವರ್ಷಗಳಿಂದ ನಡೆಸಲಾಗುತ್ತಿದೆ. ಐಆರ್‌ಬಿ ಸಂಸ್ಥೆ ಕಾಮಗಾರಿಯ ಗುತ್ತಿಗೆ ಪಡೆದಿದೆ. ಭಟ್ಕಳದಿಂದ ಕಾರವಾರದ ಗಡಿ ಪ್ರದೇಶದವರೆಗೆ ಸುಮಾರು 150 ಕಿ.ಮೀ. ಉದ್ದದ ಹೆದ್ದಾರಿ ಹಾದುಹೋಗಿದೆ.

ಜಿಲ್ಲೆಯ ಬಹುತೇಕ ಭಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಗುಡ್ಡಗಳಿದ್ದು ಅಗಲೀಕರಣಕ್ಕೆ ಗುಡ್ಡಗಳನ್ನು ಅಗೆದು ಸಮತಟ್ಟುಗೊಳಿಸಬೇಕಿದೆ. ಆದರೆ ಕಾಮಗಾರಿ ನಡೆಸುತ್ತಿರುವ ಸಂಸ್ಥೆ ಸ್ಪೋಟಕಗಳನ್ನು ಬಳಸಿ ಅವೈಜ್ಞಾನಿಕವಾಗಿ ಗುಡ್ಡದ ಬಂಡೆಗಳನ್ನು ಸಿಡಿಸುತ್ತಿದೆ. ಇದರಿಂದ ಮಳೆಗಾದಲ್ಲಿ ಗುಡ್ಡಗಳು ಕುಸಿದು ಹಾನಿಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು ಈಗಾಗಲೇ ಕೆಲವು ಕಡೆಗಳಲ್ಲಿ ಕೆಂಪು ಮಣ್ಣಿನ ಗುಡ್ಡ ಕುಸಿದಿರುವುದು ಕಂಡ ಬರುತ್ತಿದೆ. ಕೆಲವೊಮ್ಮೆ ಬಂಡೆಗಲ್ಲುಗಳು ಕೂಡ ರಸ್ತೆಯ ಮೇಲೆ ಉರುಳಿ ಬಿದ್ದಿರುವ ಬಗ್ಗೆ ವರದಿಯಾಗಿದೆ.

ಮಳೆಗಾಲದಲ್ಲಿ ಹೆಚ್ಚಿದ ಆತಂಕ

ಕೆಲವೆಡೆ ಈಗಾಗಲೇ ಸ್ಫೋಟಕ ಬಳಸಿ ಒಡೆಯಲಾದ ಬಂಡೆಗಳು ಬಿರುಕು ಬಿಟ್ಟಿವೆ. ಮಳೆಗಾಲದಲ್ಲಿ ಮಳೆ ನೀರಿನ ರಭಸಕ್ಕೆ ಸುತ್ತಲಿನ ಮಣ್ಣು ಕೊಚ್ಚಿ ಹೋಗುವುದರಿಂದ ಬಂಡೆಗಲ್ಲುಗಳು ರಸ್ತೆಯ ಮೇಲೆ ಉರುಳಿ ಬಿದ್ದು ಸಂಚಾರಿಗಳ ಪ್ರಾಣಕ್ಕೆ ಎರವಾಗುವ ಸಾಧ್ಯತೆ ಇದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ವ್ಯಾಪಕವಾಗಿ ಗುಡ್ಡಗಳನ್ನು ಅಗೆದಿರುವುದರಿಂದ ಮಳೆ ಹೆಚ್ಚಾದಂತೆ ತನ್ನ ಶಕ್ತಿ ಕಳೆದುಕೊಂಡಿರುವ ಗುಡ್ಡ ಕುಸಿಯುವ ಹಂತಕ್ಕೆ ತಲುಪಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಅದರಲ್ಲೂ ಕಾರವಾರದಿಂದ ಸದಾಶಿವಗಡಕ್ಕೆ ಸಂಪರ್ಕಿಸುವ ಭಾಗದಲ್ಲಿ ಅಪಾಯದ ಸೂಚನೆ ಹೆಚ್ಚಿದೆ. ಕಳೆದ ಮೇ 15ರಂದು ನಸುಕಿನ ವೇಳೆಯಲ್ಲಿ ಈ ಗುಡ್ಡವನ್ನು ಸ್ಪೋಟಿಸುವಾಗ ಬೃಹತ್ ಗಾತ್ರದ ಬಂಡೆಗಲ್ಲುಗಳು ರಸ್ತೆಯ ಮೇಲೆ ಉರುಳಿ ಬಿದ್ದಿತ್ತು. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತತ 7 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. 5-6 ಕಿ.ಮೀ. ವರೆಗೆ ಟ್ರಾಫಿಕ್ ಜಾಮ್ ಸಂಭವಿಸಿ ಸಾವಿರಾರು ಸಂಚಾರಿಗಳು ಸಂಕಷ್ಟ ಅನುಭವಿಸಿದ್ದರು.

ಸುರಕ್ಷತಾ ಕ್ರಮ ಕೈಗೊಳ್ಳಲಿ

ಕಾಮಗಾರಿ ನಡೆಸಲು ಕೆಲವೊಮ್ಮೆ ಬಂಡೆಗಳನ್ನು ಸ್ಫೋಟಕ ಬಳಸಿ ಒಡೆಯುವುದು ಅನಿವಾರ್ಯವಾಗುತ್ತದೆ. ಆದರೆ ಅದಕ್ಕೂ ಮುನ್ನ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮುಖ್ಯವಾಗಿ ಒಡೆಯುವ ಬಂಡೆ ಉದುರಿ ನೆಲಕ್ಕೆ ಉರುಳದಂತೆ ಕಬ್ಬಿಣದ ತಂತಿಗಳು ಹಾಗೂ ಸಿಮೆಂಟ್ ಕಾಂಕ್ರಿಟ್‌ನಿಂದ ಬಂಡೆಗಳ ಸುತ್ತ ಪ್ಲಾಸ್ಟರ್ ಅಳವಡಿಸಬೇಕಿದೆ. ಕಾಮಗಾರಿಯ ಪ್ರಾರಂಭದಲ್ಲಿ ಮಾತ್ರ ಈ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಇತ್ತೀಚೆಗೆ ಸುರಕ್ಷತೆಯೆಡೆಗೆ ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆ ನಿರ್ಲಕ್ಷ್ಯ ವಹಿಸಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಲಕ್ಷ್ಯ ವಹಿಸಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News