ನಾನು ಯಾರನ್ನೂ ಪಕ್ಷಕ್ಕೆ ಆಹ್ವಾನಿಸುವುದಿಲ್ಲ: ಎಚ್.ಡಿ.ದೇವೇಗೌಡ

Update: 2016-06-23 15:54 GMT

ಹಾಸನ, ಜೂ.23: ಜೆಡಿಎಸ್ ಪಕ್ಷಕ್ಕೆ ಬನ್ನಿ ಎಂದು ನಾನು ಯಾರನ್ನೂ ಆಹ್ವಾನಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಮಂತ್ರಿ ಮಂಡಲದ ಪುನಾರಚನೆಯಿಂದ ಉಂಟಾದ ರಾಜಕೀಯ ಬದಲಾವಣೆಯಲ್ಲಿ ನನ್ನ ಪಾತ್ರ ಏನೂ ಇಲ್ಲ. ಆದರೆ ಸಚಿವರಾಗಿದ್ದ ಅಂಬರೀಷ್ ಜೊತೆಯಲ್ಲಿ ಮಾತುಕತೆ ಮಾತ್ರ ನಡೆದಿದೆ. ಜೆಡಿಎಸ್ ಪಕ್ಷಕ್ಕೆ ಬನ್ನಿ ಎಂದು ನಾನು ಯಾರಿಗೂ ಆಹ್ವಾನಿಸಲ್ಲ ಎಂದರು.

ಅಂಬರೀಷ್ ಕೂಡ ಜೆಡಿಎಸ್ ಪಕ್ಷದಿಂದಲೇ ರಾಜಕೀಯ ಪ್ರವೇಶ ಮಾಡಿದ್ದಾರೆ. ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ ಎಂದು ಸಲಹೆ ನೀಡಿದ್ದೆ ಹೊರತು ಮತ್ಯಾವ ಚರ್ಚೆ ಮಾಡಿಲ್ಲ ಎಂದರು. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಜೆಡಿಎಸ್ ಪರ್ಯಾಯ ಶಕ್ತಿಯಾಗಿ ಬೆಳೆಯಲಿದೆ. ರಾಜ್ಯದ ಪ್ರತಿ ಹಳ್ಳಿ ಹಳ್ಳಿಗಳಿಗೂ ತೆರಳಿ ಪಕ್ಷದ ಬಲವರ್ಧನೆ ಮಾಡುವೆ. ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನ್ನು ದುರ್ಬಲಗೊಳಿಸಲು ನಾನು ಬಿಡುವುದಿಲ್ಲ ಎಂದ ದೇವೇಗೌಡರು ಮುಂದಿನ ಚುನಾವಣೆಯಲ್ಲಿ ಸ್ಥಳೀಯ ಹಾಗೂ ಜನಾನುರಾಗಿ ಮುಖಂಡರಿಗೆ ನಮ್ಮ ಪಕ್ಷದಲ್ಲಿ ಅವಕಾಶ ಸಿಗಲಿದೆ. ಇತರೆ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

2018ಕ್ಕೆ ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ಕಾಣಲಿದ್ದು, ವಿಧಾನಸಬೆ ಚುನಾವಣೆ ನಮ್ಮ ಮುಖ್ಯ ಗುರಿಯಾಗಿರುವುದಾಗಿ ಹೇಳಿದರು. ಜೆಡಿಎಸ್ ಪಕ್ಷದ ಶಕ್ತಿ ಗೊತ್ತಿರುವ ನಾಯಕರು ನಮ್ಮ ಪಕ್ಷಕ್ಕೆ ಬರ್ತಾರೆ ಎಂದು ತಿಳಿಸಿದರು. ನನ್ನ ರಾಜಕೀಯ ಅನುಭವದಲ್ಲಿ ಇಂತಹ ಆಡಳಿತ ಕುಸಿತವನ್ನು ಎಂದೂ ನೋಡಿಲ್ಲ. ಭಿನ್ನಮತಿಯರನ್ನು ಪಕ್ಷಕ್ಕೆ ಸೇರಿಕೊಳ್ಳುವ ಪ್ರಸ್ತಾವನೆ ಸದ್ಯಕ್ಕಿಲ್ಲ. ಭಿನ್ನಮತೀಯ ಶಾಸಕ ಸ್ಥಾನದ ಅನರ್ಹತೆ ಕುರಿತು ಸ್ಪೀಕರ್‌ಗೆ ದೂರು ಸಲ್ಲಿಸಿದ್ದೇವೆ ಎಂದರು.

ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಅರ್ಕಾವತಿ ಡಿನೋಟಿಫಿಕೇಷನ್ ವಿಚಾರದಲ್ಲಿ ಕಡತಗಳೇ ಮಾಯವಾಗಿದೆ ಎಂದರೆ ಈ ರಾಜ್ಯದ ಆಡಳಿತ ವ್ಯವಸ್ಥೆಯನ್ನು ಜನತೆ ಅರ್ಥಮಾಡಿಕೊಳ್ಳಬೇಕು ಎಂದು ಆತಂಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News