ರಾವ್‌ಬಹದೂರ್ ರಾಯ್‌ರನ್ನು ಹುದ್ದೆಯಿಂದ ವಜಾಗೊಳಿಸಲು ಒತ್ತಾಯ
ಚಿಕ್ಕಮಗಳೂರು, ಜೂ.23: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಅಧ್ಯಕ್ಷ ರಾವ್‌ಬಹದೂರ್ ರಾಯ್‌ರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಸಮಿತಿಯ ಜಿಲ್ಲಾಧ್ಯಕ್ಷ ತರೀಕೆರೆ ಎನ್.ವೆಂಕಟೇಶ್ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರನ್ನು ಗುರುವಾರ ಭೇಟಿ ಮಾಡಿದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು. ರಾವ್‌ಬಹದೂರ್ ರಾಯ್ ಅವರ ಅವಿವೇಕತನದ ಹೇಳಿಕೆಯಿಂದಾಗಿ ದೇಶದ ಜನತೆಗೆ ಮತ್ತು ಅಂಬೇಡ್ಕರ್ ಅಭಿಮಾನಿಗಳಿಗೆ ಅತೀವ ನೋವುಂಟಾಗಿದೆ ಈ ಹೇಳಿಕೆಯಿಂದ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದಂತಾಗಿದೆ. ಎಂದು ಆರೋಪಿಸಿದರು.
ಅಂಬೇಡ್ಕರ್ ಅವರ ಬುದ್ಧಿಮತ್ತೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಹೇಳಿಕೆಯಿಂದಾಗಿ ದೇಶ ತಲೆ ತಗ್ಗಿಸುವಂತಾಗಿದೆ. ಅಂಬೇಡ್ಕರ್ ಅವರು ದಲಿತ ನಾಯಕರಲ್ಲ. ಸಂವಿಧಾನ ರಚನೆಯಲ್ಲಿ ಅವರ ಪಾತ್ರವಿಲ್ಲ ಎಂಬುದನ್ನು ರಾವ್‌ಬಹದೂರ್ ರಾಯ್ ಅವರು ಸಾಬೀತುಪಡಿಸಬೇಕು. ಇಡೀ ದೇಶದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ ಪದಾಧಿಕಾರಿಗಳು ಅವರ ವಿರುದ್ಧ್ದ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಮರ್ಲೆ ಅಣ್ಣಯ್ಯ, ವಿ.ಧರ್ಮೇಶ್, ತಾಲೂಕು ಸಂಚಾಲಕ ಚಂದ್ರಪ್ಪ, ಸಂಘಟನಾ ಸಂಚಾಲಕರಾದ ಯು.ಸಿ.ರಮೇಶ್, ಶೇಖರ್ ಮತ್ತಿತರರು ಉಪಸ್ಥಿತರಿದ್ದರು.