×
Ad

ಜಮೀನಿಗೆ ಅತಿಕ್ರಮವಾಗಿ ಪ್ರವೇಶಿಸಿ ಕಿರುಕುಳ

Update: 2016-06-23 23:20 IST

ಚಿಕ್ಕಮಗಳೂರು, ಜೂ.23: ಸರಕಾರ ಹಕ್ಕಿಪಿಕ್ಕಿ ಜನಾಂಗಕ್ಕೆ ನೀಡಿರುವ ಭೂಮಿಯಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿ ಕಿರುಕುಳ ನೀಡುತ್ತಿರುವವರ ವಿರುದ್ಧ್ದ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಂಡಿಗ ಗ್ರಾಪಂ ವ್ಯಾಪ್ತಿಯ ಮಲ್ಲೇನಹಳ್ಳಿ ಹಕ್ಕಿಪಿಕ್ಕಿ ಜನಾಂಗದವರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿ ಅಪರ ಜಿಲ್ಲಾಧಿಕಾರಿ ವೈಶಾಲಿಯವರಿಗೆ ಮನವಿ ಸಲ್ಲಿಸಿದರು.

ಬಿಂಡಿಗ ಗ್ರಾಪಂ ವ್ಯಾಪ್ತಿಯ ಸ.ನಂ.93ರಲ್ಲಿ ಹಕ್ಕಿಪಿಕ್ಕಿ ಜನಾಂಗಕ್ಕೆ ಸರಕಾರ ಜಮೀನುಗಳನ್ನು ಮಂಜೂರು ಮಾಡಿದ್ದು, ಹಕ್ಕು ಪತ್ರಗಳನ್ನು ನೀಡಿದೆ. ಅದರ ಪಕ್ಕದಲ್ಲಿರುವ ಸ.ನಂ.121ರಲ್ಲಿ 2 ಎಕರೆ ಬೀಳು ಪ್ರದೇಶವಿದೆ. ಆ ಪ್ರದೇಶದಲ್ಲಿ ಕುಡಿಯುವ ನೀರಿನ ಬೋರ್‌ವೆಲ್ ಸಹ ಇದೆ. ನಾವು ವ್ಯಾಪಾರಕ್ಕೆ ಹೋದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಕೆಲವರು ನಕಲಿ ದಾಖಲಾತಿಗಳನ್ನು ಮಾಡಿಸಿಕೊಂಡು ನಮ್ಮ ಜಮೀನುಗಳಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದರು.

ಈ ಬಗ್ಗೆ ಪ್ರಶ್ನಿಸಿದರೆ ಬಂದೂಕುಗಳೊಂದಿಗೆ ಬರುವ ಜನ ನಮ್ಮನ್ನು ಹೆದರಿಸುತ್ತಿದ್ದಾರೆ. ಇವರಿಂದ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿರುವ ಗ್ರಾಮಸ್ಥರು ಅತಿಕ್ರಮವಾಗಿ ಪ್ರವೇಶಿಸಿದವರನ್ನು ಪ್ರಶ್ನಿಸಿದ ಕಾರಣಕ್ಕೆ ನಮ್ಮ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮನವಿಯನ್ನು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ವೈಶಾಲಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಚಿಕ್ಕಮಗಳೂರು ತಹಶೀಲ್ದಾರ್ ಶಿವಣ್ಣರವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಆದಿವಾಸಿ ರಕ್ಷಣಾ ಪರಿಷತ್‌ನ ಅಧ್ಯಕ್ಷ ಪಿ.ರಾಜೇಶ್ ನೇತೃತ್ವದಲ್ಲಿ ಅಗ್ರಜ, ಲಕ್ಷ್ಮಣ, ರತನ್‌ಸಿಂಗ್, ಕ್ರಾಂತಿ, ನ್ಯೂಸ್‌ಬಿ., ಕಂದು, ಆಯಾಜಿ, ನಗೀನಾ, ಬೀಜೆ, ಅಂಬಿಕಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News