ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ: ಸಚಿವ ಮಲ್ಲಿಕಾರ್ಜುನ
ದಾವಣಗೆರೆ, ಜೂ.23: ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ, ತೋಟಗಾರಿಕೆ ಇಲಾಖೆಯ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಜೊತೆಗೆ ಇಡೀ ದೇಶಕ್ಕೆ ಮಾದರಿಯಾಗುವಂತೆ ಉಭಯ ಇಲಾಖೆಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವುದಾಗಿ ನೂತನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ತಮ್ಮ ತಂದೆ ಡಾ. ಶಾಮನೂರು ಶಿವಶಂಕರಪ್ಪ ಸೇರಿದಂತೆ ಯಾರಿಗೂ ಕಪ್ಪುಚುಕ್ಕೆ ಬಾರದಂತೆ ಕೆಲಸ ಮಾಡುವ ಜೊತೆಗೆ ರೈತರು, ಜನ ಸಾಮಾನ್ಯರ ಹಿತ ಕಾಯುವ ನಿಟ್ಟಿನಲ್ಲಿ ಉಭಯ ಇಲಾಖೆಗಳನ್ನು ಮುನ್ನಡೆಸುವೆ ಎಂದರು.
ನೂತನ ಸಚಿವರಾದ ನಂತರ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ತಂದೆ ಶಾಮನೂರು ಶಿವಶಂಕರಪ್ಪನಿರ್ವಹಿಸಿದ್ದ ಎರಡೂ ಖಾತೆಗಳೇ ತಮಗೂ ಲಭಿಸಿವೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂಧಿಸಿದಂತೆ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ದೇಶದಲ್ಲೇ ಅತ್ಯುತ್ತಮ ಎಪಿಎಂಸಿ ಇಲಾಖೆಯೆಂಬ ಪ್ರಶಸ್ತಿಯೂ ತಮ್ಮ ತಂದೆಯ ಅವಧಿಯಲ್ಲೇ ಲಭಿಸಿದ್ದು, ಅದೇ ಸಾಧನೆ ಮುಂದುವರಿಸುತ್ತೇವೆ ಎಂದರು.
ರೈತರ ಉತ್ಪನ್ನಗಳಿಗೆ ಉತ್ತಮ ದರ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಅಡಿಕೆ ದರ ಕುಸಿತದಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚಿಸಿದ್ದೇವೆ. ಅಲ್ಲದೆ, ಅನ್ಯ ದೇಶಗಳಿಂದ ಅಡಿಕೆ ಆಮದು ನಿಲ್ಲಿಸುವಂತೆಯೂ ಕೇಂದ್ರ ಸರಕಾರಕ್ಕೆ ಪತ್ರ ಬರೆದು, ಒತ್ತಾಯಿಸುತ್ತೇವೆ. ನಮ್ಮ ರಾಜ್ಯದ ರೈತರು, ಬೆಳೆಗಾರರ ಹಿತ ಕಾಯಲು ತಾವು ಬದ್ಧ ಎಂದರು.
ಅಡಿಕೆಯನ್ನು ಪಾನ್ ಮಸಾಲ, ಗುಟ್ಕಾಗೆ ಬಳಕೆ ಮಾಡಲಾಗುತ್ತಿದೆ. ಅಡಿಕೆ ಆಮದು ಮಾಡಿಕೊಳ್ಳುತ್ತಿದ್ದು, ಇದರಿಂದಲೂ ಅಡಿಕೆ ಧಾರಣೆ ಕುಸಿದಿದೆ. ಅಸ್ಸಾಂ ಇತರೆ ರಾಜ್ಯಗಳಿಂದಲೂ ಅಡಿಕೆಯನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳುತ್ತಿದ್ದು, ಇದರಿಂದಲೂ ಇಲ್ಲಿನ ಬೆಳೆಗಾರರಿಗೆ ಸಂಕಷ್ಟ ಬಂದೊದಗಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ಸೇರಿದಂತೆ ರಾಜ್ಯದ ಅನೇಕ ಕಡೆ ಬೆಳೆಗಾರರು ಸಂಕಷ್ಟದಲ್ಲಿರುವ ಅರಿವಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಕೆಲ ವಾರಗಳಿಂದ ಸುರಿಯುತ್ತಿರುವ ಮಳೆ, ಗಾಳಿಯಿಂದಾಗಿ ಹಾಳಾಗಿರುವ ಅಡಿಕೆ, ತೆಂಗು, ಬಾಳೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆ, ಗಾಳಿಯಿಂದಾದ ಹಾನಿ ಬಗ್ಗೆ ವರದಿ ತರಿಸಿಕೊಂಡು ಸೂಕ್ತ ಪರಿಹಾರ ಒದಗಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಸಂಪುಟ ಸಭೆ, ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದರು.
ಕಳೆದ ಕೆಲ ದಿನಗಳಿಂದ ಉತ್ತಮ ಮಳೆ, ಬೆಳೆಯಾಗುತ್ತಿದೆ. ಜಿಲ್ಲೆಯಲ್ಲಿ ರೈತರಿಗೆ ಬಿತ್ತನೆ ಬೀಜ, ಗೊಬ್ಬರಕ್ಕೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಕಳಪೆ, ಕಲಬೆರಕೆ ಬೀಜ ಮಾರಾಟ ಮಾಡದಂತೆ ವ್ಯಾಪಾರಸ್ಥರಿಗೆ ಸೂಚಿಸಿದ್ದು, ಕೃಷಿ ಇಲಾಖೆ ಅಧಿಕಾರಿಗಳಿಗೂ ಈ ಬಗ್ಗೆ ನಿಗಾ ವಹಿಸಲು ನಿರ್ದೇಶಿಸಿದ್ದೇವೆ. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಗೊಬ್ಬರದ ಅಭಾವವಂತೂ ತಲೆದೋರುವುದಿಲ್ಲ ಎಂದು ಅವರು ತಿಳಿಸಿದರು.
ಈಗಾಗಲೇ ರಾಜ್ಯ ಸರಕಾರ 3ವರ್ಷ ಪೂರೈಸಿದ್ದು, ಬಾಕಿ ಎರಡು ವರ್ಷದಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ, ಯೋಜನೆ ಅನುಷ್ಠಾನಗೊಳ್ಳಲಿವೆ. ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಪಕ್ಷ ಸಂಘಟನೆ ಜೊತೆಗೆ ಸರಕಾರದ ಯೋಜನೆ, ಕಾರ್ಯಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿಸಲು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರಲು ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಮತ್ತಷ್ಟು ಹುಮ್ಮಸ್ಸಿನಿಂದ ಕಾರ್ಯ ನಿರ್ವಹಿಸಬೇಕು ಎಂದರು.