×
Ad

ರೈತರಿಂದ ಬೈಸಿಕೊಳ್ಳುವ ಕೆಲಸ ಮಾಡಬೇಡಿ: ಶಾಸಕ ವೈ.ರಾಘವೇಂದ್ರ

Update: 2016-06-23 23:23 IST

ಶಿವಮೊಗ್ಗ, ಜೂ. 23: ‘ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಕೆರೆ, ಕಾಲುವೆಗಳ ದುರಸ್ತಿಗೆ ಒತ್ತು ನೀಡಿ. ನೀವು ಮಾಡುವ ತಪ್ಪಿಗೆ ರೈತರಿಂದ ನಾವು (ಜನಪ್ರತಿನಿಧಿಗಳು) ಬೈಸಿಕೊಳ್ಳುವ ಪರಿಸ್ಥಿತಿ ಸೃಷ್ಟಿ ಮಾಡಬೇಡಿ. ಎಚ್ಚರಿಕೆಯಿಂದ ಕೆಲಸ ಮಾಡಿ’ ಎಂದು ಶಾಸಕ ಬಿ.ವೈ.ರಾಘವೇಂದ್ರ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರಿ ಸಮಿತಿಯ ಅಧ್ಯಕ್ಷ ವೆಂಕಟರಾವ್ ವೈ. ಘೋರ್ಪಡೆ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಹಿಂದುಳಿದ ತಾಲೂಕುಗಳಾದ ಶಿಕಾರಿಪುರ ಹಾಗೂ ಸೊರಬದಲ್ಲಿ ನಡೆಸಲಾಗಿರುವ ಕೆರೆ, ಕಾಲುವೆಗಳ ದುರಸ್ತಿಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗೆ ಮಾಹಿತಿ ನೀಡಿದರು.

ಕಳೆದ ಬಾರಿಯ ಮಳೆಗಾಲದಲ್ಲಿ ಕೆರೆ-ಕಾಲುವೆ ದುರಸ್ತಿಯಿಂದ ಸಾಕಷ್ಟು ತೊಂದರೆ ಉದ್ಬ್ಭವವಾಗಿತ್ತು. ರೈತರು ತೀವ್ರ ತೊಂದರೆ ಎದುರಿಸುವಂತಾಗಿತ್ತು. ಈಗಾಗಲೇ ಮಳೆಗಾಲ ಆರಂಭವಾಗಿದೆ. ಎಲ್ಲೆಲ್ಲಿ ಕೆರೆ, ಕಾಲುವೆ ದುರಸ್ತಿಯಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ಸಮರ್ಪಕವಾಗಿ ಕೆಲಸ ಮಾಡಿಸಿ. ಗೊಂದಲಕ್ಕೆ ಅವಕಾಶ ಕಲ್ಪಿಸಬೇಡಿ ಎಂದು ರಾಘವೇಂದ್ರ ಸಲಹೆ ನೀಡಿದರು.

ಕ್ರಮಕೈಗೊಳ್ಳಿ: ಕೆಎಸ್ಸಾರ್ಟಿಸಿ ಇಲಾಖೆಯ ಮೇಲಿನ ಚರ್ಚೆಯ ವೇಳೆ, ಶಿಕಾರಿಪುರ ಸರಕಾರಿ ಬಸ್ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಕಟ್ಟಡವನ್ನು ಕೆಎಸ್ಸಾರ್ಟಿಸಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಜಾಗ ಕಿರಿದಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕೆಲಸ ಮಾಡಿಲ್ಲವೆಂದು ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ಇದಕ್ಕೆ ಬಿ.ವೈ.ರಾಘವೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಷ್ಟಪಟ್ಟು ಕೃಷಿ ಇಲಾಖೆಯ ಕಟ್ಟಡವನ್ನು ಕೆಎಸ್ಸಾರ್ಟಿಸಿಗೆ ಹಸ್ತಾಂತರ ಮಾಡಲಾಗಿದೆ. ಇದೀಗ ಜಾಗ ಕಿರಿದಾಗಿದೆ, ಸರಿಯಾಗಿಲ್ಲವೆಂಬ ಸಬೂಬು ಹೇಳುತ್ತಿದ್ದೀರಾ. ಇಷ್ಟು ದಿನ ಏನು ಮಾಡುತ್ತಿದ್ದೀರಿ. ಮೊದಲು ಕೃಷಿ ಇಲಾಖೆ ಕಟ್ಟಡವನ್ನು ವಶಕ್ಕೆ ಪಡೆದು ಕೆಲಸ ಆರಂಭಿಸಿ. ನೀವು ಸ್ಥಳಕ್ಕೆ ಭೆೇಟಿ ನೀಡಿ ಪರಿಶೀಲನೆ ಮಾಡಿ. ಸಮಸ್ಯೆ ಪರಿಹಾರಕ್ಕೆ ತಾವು ಕೂಡ ಅಗತ್ಯ ಸಹಕಾರ ನೀಡುತ್ತೆವೆ ಎಂದು ತಿಳಿಸಿದರು.  

ಜಿಪಂ ಸಿಇಒ ಕೆ.ರಾಕೇಶ್‌ಕುಮಾರ್ ಉಪಸ್ಥಿತರಿದ್ದರು.

ನೋಟಿಸ್ ಆದೇಶ: ದೌಡಾಯಿಸಿದ ಅಧಿಕಾರಿ

 ಸಭೆಗೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ವಿಶ್ವನಾಥ್ ಗೈರು ಹಾಜರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಪಂ ಸಿಇಒ ಕೆ.ರಾಕೇಶ್‌ಕುಮಾರ್ ಅಧಿಕಾರಿಗೆ ನೋಟಿಸ್ ಜಾರಿಗೊಳಿಸುವಂತೆ ತಮ್ಮ ಕೆಳಹಂತದ ಅಧಿಕಾರಿಗೆ ಸೂಚನೆ ನೀಡಿದರು. ನೋಟಿಸ್ ನೀಡಿದ ವಿಷಯ ತಿಳಿಯುತ್ತಿದ್ದಂತೆ ವಿಶ್ವನಾಥ್‌ರವರು ಸಭೆೆಗೆ ದೌಡಾಯಿಸಿದರು. ಆದರೆ ಅಷ್ಟರಲ್ಲಿ ಸಭೆ ಪೂರ್ಣಗೊಂಡಿತ್ತು. ಸಭಾಂಗಣದ ವೇದಿಕೆಯಲ್ಲಿ ಅನೌಪಚಾರಿಕವಾಗಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದ ಸಿಇಒ ಕೆ.ರಾಕೇಶ್‌ಕುಮಾರ್‌ರವರಿಗೆ ತಾನು ಸಭೆೆಗೆ ಗೈರು ಹಾಜರಾಗಲು ಕಾರಣ ಹೇಳುತ್ತಿದ್ದರು. ಆದರೆ ಸಿಇಒ ಮಾತ್ರ ಅವರ ಮಾತು ಕೇಳಲು ಸಿದ್ಧ್ದರಿರಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News