×
Ad

ರಾಜ್ಯದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಅನುದಾನ

Update: 2016-06-23 23:24 IST

 ಶಿವಮೊಗ್ಗ, ಜೂ. 23: ಡಾ. ಡಿ.ಎಂ.ನಂಜುಂ ಡಪ್ಪವರದಿಯನ್ವಯ ಹಿಂದುಳಿದ ತಾಲೂಕುಗಳೆಂದು ಗುರುತಿಸಲಾದ ರಾಜ್ಯದ ಒಟ್ಟು 114ತಾಲೂಕುಗಳ ಸರ್ವಾಂಗೀಣ ವಿಕಾಸಕ್ಕೆ 2008ರಿಂದ 2014-15ನೆಯ ಸಾಲಿನ ಅವಧಿಯಲ್ಲಿ ಒಟ್ಟು 11,272 ಕೋಟಿ ರೂ. ಅನುದಾನ ಮಂಜೂರಾಗಿದೆ. ಆ ಪೈಕಿ 10,338ಕೋಟಿ ರೂ. ಅನುದಾನವನ್ನು ಖರ್ಚು ಮಾಡಲಾಗಿದೆ ಎಂದು ಡಾ. ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ವೆಂಕಟರಾವ್ ವೈ. ಘೋರ್ಪಡೆ ಹೇಳಿದರು.

ಗುರುವಾರ ಜಿಲ್ಲಾ ಪಂಚಾಯತ್ ಅಬ್ದುಲ್ ನಝೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸೊರಬ ಮತ್ತು ಶಿಕಾರಿಪುರ ಹಿಂದುಳಿದ ತಾಲೂಕುಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2007ರಲ್ಲಿ ಜಾರಿಯಾದ ನಂಜುಂಡಪ್ಪ ವರದಿ ಅನುಷ್ಠಾನಕ್ಕಾಗಿ 8ವರ್ಷಗಳ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಮುಖ್ಯಮಂತ್ರಿಗಳು ಮುಂದಿನ ಮೂರು ವರ್ಷಗಳ ಅವಧಿಗೆ ಮುಂದುವರಿಸಿ ಆದೇಶಿಸಿದ್ಧಾರೆ. ಈ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಿದ್ದು, ಕಳೆದ ಸಾಲಿನಲ್ಲಿ 2,500ಕೋಟಿ ರೂ. ಹಾಗೂ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 3,000 ಕೋಟಿ ರೂ. ಕಾಯ್ದಿರಿಸಲಾಗಿದೆ. ಅಂತೆಯೆ ಮುಂದಿನ ಮೂರು ವರ್ಷಗಳ ಅವಧಿಗೆ ಪ್ರತಿವರ್ಷ ಮೂರು ಸಾವಿರ ಕೋಟಿ ರೂ.ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದರು.

ರಾಜ್ಯದ ಹಿಂದುಳಿದ ತಾಲೂಕುಗಳನ್ನು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ಗುಲ್ಬರ್ಗಾ ವಿಭಾಗದಲ್ಲಿ 28, ಬೆಳಗಾವಿ 31, ಬೆಂಗಳೂರು 33 ಹಾಗೂ ಮೈಸೂರು 22 ಸೇರಿ ಒಟ್ಟು 114 ತಾಲೂಕುಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಅತ್ಯಂತ ಹಿಂದುಳಿದ 39, ಅತಿ ಹಿಂದುಳಿದ 40 ಹಾಗೂ ಹಿಂದುಳಿದ 35 ತಾಲೂಕುಗಳನ್ನು ಗುರುತಿಸಲಾಗಿದೆ ಎಂದು ನುಡಿದರು.

ಸರಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಗುಲ್ಬರ್ಗಾ ವಿಭಾಗಕ್ಕೆ ಶೇ.40 ರಷ್ಟು, ಬೆಳಗಾವಿ ಶೇ.20, ಬೆಂಗಳೂರು ಶೇ.25ರಷ್ಟು ಹಾಗೂ ಮೈಸೂರು ಶೇ.15ರಷ್ಟು ಅನುದಾನವನ್ನು ಅನುಪಾತದ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು ಎಂದರು.

ಶಿಕಾರಿಪುರ ತಾಲೂಕಿಗೆ ಬಿಡುಗಡೆಯಾದ ಒಟ್ಟು 52.74ಕೋಟಿ ರೂ. ಅನುದಾನದಲ್ಲಿ 48.07ಕೋಟಿ ರೂ. ಖರ್ಚು ಮಾಡಲಾಗಿದೆ. ಸೊರಬ ತಾಲೂಕಿಗೆ ಬಿಡುಗಡೆಯಾದ ಒಟ್ಟು 61.56ಕೋಟಿ ರೂ. ಅನುದಾನದಲ್ಲಿ 56ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಅನುದಾನವನ್ನು ಆಸ್ತಿ ನಿರ್ಮಾಣ, ಮೂಲಭೂತ ಸೌಕರ್ಯಗಳು ಮತ್ತು ಸಂಪರ್ಕ, ಫಲಾನುಭವಿ ಪ್ರಾಯೋಜಿತ ಯೋಜನೆಗಳು, ಸೌಲಭ್ಯಗಳು ಮತ್ತು ಸೇವೆಗಳು ಹಾಗೂ ಸಾಮರ್ಥ್ಯವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಗಳನ್ನಾಗಿ ವಿಭಾಗಿಸಿ ಪ್ರಗತಿ ಪರಿಶೀಲಿಸಲಾಗುವುದು ಎಂದರು..

ಸಭೆೆಯಲ್ಲಿ ಉಪಸ್ಥಿತರಿದ್ದ ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ನಂಜುಂಡಪ್ಪ ವರದಿಯನ್ವಯ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಬಿಡುಗಡೆಯಾದ ಅನುದಾನ ನಿರೀಕ್ಷೆಯಂತೆ ಬಳಕೆಯಾಗದಿರುವುದು ಬೇಸರದ ಸಂಗತಿ. ಸಂಬಂಧಿಸಿದ ಇಲಾಖಾಧಿಕಾರಿಗಳು ತ್ವರಿತಗತಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಬಳಸಿಕೊಂಡು ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ನಂಜುಂಡಪ್ಪವರದಿಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪ್ರತಿ ಮಾಹೆ ಸಭೆ ಕರೆದು ಮಾಹಿತಿ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.

ಜಿಪಂ ಸಿಇಒ ಡಾ.ರಾಕೇಶ್‌ಕುಮಾರ್ ಮಾತನಾಡಿ, ಈ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ಮುಂದಿನ ತಿಂಗಳಿನಿಂದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆೆಯಲ್ಲಿ ಚರ್ಚಿಸಿ, ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದರು. ಸಭೆೆಯಲ್ಲಿ ಸೊರಬ ಮತ್ತು ಶಿಕಾರಿಪುರ ತಾಲೂಕುಗಳ ವ್ಯಾಪ್ತಿಯ 23 ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News