ಕೇಂದ್ರದಿಂದ ಹಣ ಬಿಡುಗಡೆಗೆ ವಿಳಂಬ: ಸಚಿವ ಎಚ್.ಕೆ.ಪಾಟೀಲ್
ಬೆಂಗಳೂರು, ಜೂ. 23: ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸಕಾಲಕ್ಕೆ ಹಣ ಬಿಡುಗಡೆ ಮಾಡದೆ ಇದ್ದುದರಿಂದ ಬರಗಾಲದ ವೇಳೆ ತೀವ್ರ ತೊಂದರೆ ಅನುಭವಿಸಬೇಕಾಯಿತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಹಣ ಬಿಡುಗಡೆ ಮಾಡದಿದ್ದರೂ ಸರಕಾರ ತನ್ನ ಬೊಕ್ಕಸದಿಂದ 600ಕೋಟಿ ರೂ. ನರೇಗಾ ಯೋಜನೆಗೆ ಬಿಡುಗಡೆ ಮಾಡಿ ಕೂಲಿಕಾರರಿಗೆ ಹಣ ಪಾವತಿಸಿದೆ ಎಂದರು.
ಕೇಂದ್ರ ಪ್ರಾಯೋಜಿತ ಯೋಜನೆಗಳ ಉಸ್ತುವಾರಿ ಮತ್ತು ಮೇಲ್ವಿಚಾರಣೆಗೆ ರಚಿಸಲಾಗಿರುವ ಈ ಸಮಿತಿ ಮೂರು ತಿಂಗಳಿಗೊಮ್ಮೆ ಸಭೆ ಸೇರುತ್ತದೆ ಎಂದ ಅವರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯ ಅಡಿಯಲ್ಲಿ ಪ್ರತಿ ಪಂಚಾಯ್ತಿಯಿಂದ ಆಯ್ಕೆಯಾಗಿರುವ ಫಲಾನುಭವಿಗಳ ಪೈಕಿ ಸ್ವಯಂ ಉದ್ಯೋಗ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಸಾಲ ಪಡೆಯಲು ಬ್ಯಾಂಕಿಗೆ ನೀಡುವ ಅರ್ಜಿಗಳ ಪೈಕಿ 9 ಸಾವಿರ ಅರ್ಜಿಗಳಿಗೆ ಸಾಲ ವಿತರಣೆ ಆಗಿದೆ ಎಂದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ವತಿಯಿಂದ 30 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ ಎಂದ ಅವರು, ರಾಜೀವ್‌ಗಾಂಧಿ ಯುವಚೈತನ್ಯ ಯೋಜನೆಯಡಿ ಫಲಾನುಭವಿಗಳ ಬಾಕಿ ಇರುವ 40 ಸಾವಿರ ಸಾಲದ ಅರ್ಜಿಗಳನ್ನು ಶೀಘ್ರ ವಿಲೇಗೆ ಸೂಚಿಸಲಾಗಿದೆ ಎಂದು ಹೇಳಿದರು.
ನಿರ್ಮಲ ಕರ್ನಾಟಕ ಅಭಿಯಾನದಡಿ ಶಿವಮೊಗ್ಗ, ಬೆಳಗಾವಿ, ಕೊಪ್ಪಳ ಸೇರಿದಂತೆ ಏಳು ಜಿಲ್ಲೆಗಳನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳಾಗಿ ಪರಿರ್ವತನೆ ಗೊಂಡಿವೆ. 2016ರ ಅಕ್ಟೋಬರ್ 2ರೊಳಗೆ ಮೇಲ್ಕಂಡ ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳಾಗಿ ಘೋಷಿಸಲಾಗುವುದು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸಮೀಪದಲ್ಲೇ ಎಟಿಎಂಗಳನ್ನು ಸ್ಥಾಪಿಸಲು ಬ್ಯಾಂಕರ್ ಸಮಿತಿ ಜಂಟಿ ಕಾರ್ಯದರ್ಶಿ ಎಸ್.ಎಂ.ದೇಸಾಯಿ ಅವರಿಗೆ ಇದೇ ಸಂದರ್ಭದಲ್ಲಿ ಪಾಟೀಲ್ ಸೂಚಿಸಿದರು.
ಸಭೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಬಿ.ಜಿ.ಗೋವಿಂದಪ್ಪ, ಕೇಂದ್ರ ಸರಕಾರದ ಪ್ರತಿನಿಧಿ ರಾಜೀವ್ ಬೆಹಲ್, ಪುಟ್ಟರಂಗಶೆಟ್ಟಿ, ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ನಾಗಾಂಬಿಕಾದೇವಿ, ಹಿರಿಯ ಅಧಿಕಾರಿಗಳಾದ ಶಂಭು ದಯಾಳ್ ಮೀನಾ, ಮುನೀಶ್ ವೌದ್ಗಿಲ್ ಮತ್ತಿತರರು ಉಪಸ್ಥಿತರಿದ್ದರು.