×
Ad

ಕರಾವಳಿ ರಾಜ್ಯಗಳ ಮೀನುಗಾರಿಕಾ ಸಚಿವರ ಸಮ್ಮೇಳನ

Update: 2016-06-23 23:35 IST

ಬೆಂಗಳೂರು, ಜೂ. 23: ಮೀನು ಸಂತತಿ ನಾಶ, ಮೀನುಗಾರಿಕೆಯ ಭವಿಷ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪೂರ್ವ-ಪಶ್ಚಿಮ ಕರಾವಳಿ ಭಾಗದ ಎಲ್ಲ ರಾಜ್ಯಗಳ ಮೀನುಗಾರಿಕಾ ಸಚಿವರ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದ ನಾಲ್ಕನೆ ಮಹಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೊಠಡಿ ಪ್ರವೇಶದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಸ್ಥಿರ ಮೀನುಗಾರಿಕೆ ಕೃಷಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಈ ಸಮ್ಮೇಳನಕ್ಕೆ ಮಹತ್ವವಿದೆ ಎಂದು ಹೇಳಿದರು.
ಕಾನೂನು ಅಗತ್ಯ: ವಿದೇಶದಲ್ಲಿ ಮೀನುಗಾರಿಕೆಗೆ ಕಟ್ಟುನಿಟ್ಟಿನ ಕಾನೂನುಗಳಿವೆ. ಆದರೆ, ರಾಜ್ಯ ಸೇರಿದಂತೆ ಕರಾವಳಿ ವ್ಯಾಪ್ತಿಯಲ್ಲಿ ರಾಜ್ಯಗಳಲ್ಲಿ ಏಕರೂಪದ ಕಾನೂನು ಅಗತ್ಯ ಎಂದ ಅವರು, ಮೀನಿನ ಸಂತತಿ ಉಳಿಸಲು ಸುಸ್ಥಿರ ಮೀನುಗಾರಿಕೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಮೀನಿನ ಆಹಾರ ಪೌಷ್ಟಿಕಾಂಶಗಳಿಂದ ಕೂಡಿದ್ದು, ಹೆಚ್ಚಿನ ಬೇಡಿಕೆಯಿದೆ. ಮೀನು ಕೃಷಿಯಿಂದ ರಾಜ್ಯ ಸರಕಾರಕ್ಕೆ ಆದಾಯವೂ ಬರುತ್ತದೆ. ಆ ಹಿನ್ನೆಲೆಯಲ್ಲಿ ಒಳನಾಡು ಮೀನುಗಾರಿಕೆಗೆ ಕಾಯಕಲ್ಪ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.
 ಒಳನಾಡು ಮೀನುಗಾರಿಕೆಗೆ ಹೆಚ್ಚು ಅವಕಾಶವಿದೆ. ಅದನ್ನು ಈವರೆಗೂ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಮೀನುಗಾರಿಕೆ ಕುಟುಂಬದ ಹಿನ್ನೆಲೆಯಿಂದ ಬಂದ ನನಗೆ ಮೀನುಗಾರಿಕೆ ಖಾತೆ ದೊರೆತಿದ್ದು, ಕರಾವಳಿ ಸೇರಿದಂತೆ ಮೀನುಗಾರರ ಸಮ
ಸ್ಯೆ ಅರಿವಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೆ ತಂದೆ-ತಾಯಿಯಂತೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನಡೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕ್ರೀಡಾಪಟುಗಳಿಗೆ ತರಬೇತಿ: ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಉತ್ತಮ ಆಹಾರ ಹಾಗೂ ತರಬೇತಿ ನೀಡಿದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಹೊರ ಹೊಮ್ಮಲಿದ್ದಾರೆಂದ ಅವರು, ರಾಜ್ಯದಲ್ಲಿರುವ ಶೇ.60ರಷ್ಟು ಯುವಕರನ್ನು ಸಾಮಾಜಿಕ ಪಿಡುಗುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಹಾಗೂ ದೇಶಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ದೇಶದ ಪ್ರಗತಿ ಸಾಧ್ಯ ಎಂದು ತಿಳಿಸಿದರು.
ಮೊದಲ ಬಾರಿಗೆ ನನಗೆ ಸಚಿವ ಸ್ಥಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ವರಿಷ್ಠರಿಗೆ ಅಭಿನಂದನೆ ಸಲ್ಲಿಸುವೆ. ಅವರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News