×
Ad

ಮೋದಿ ಯೋಗವನ್ನು ಸರಕನ್ನಾಗಿಸಿದ್ದಾರೆ: ನಿಡುಮಾಮಿಡಿಶ್ರೀ

Update: 2016-06-23 23:36 IST

ಬೆಂಗಳೂರು, ಜೂ.23: ಪ್ರಧಾನಿ ನರೇಂದ್ರ ಮೋದಿ ಯೋಗವನ್ನು ಹಣ ಮಾಡುವ ಉದ್ಯಮವಾಗಿಸಲು ಹೊರಟಿದ್ದಾರೆ ಎಂದು ನಿಡುಮಾಮಿಡಿ ಮಠದ ಚನ್ನಮಲ್ಲ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ನಿಡುಮಾಮಿಡಿ ಮಠದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆಯಿಂದ ಹಮ್ಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಮುಖಂಡರು ನಡೆಸುತ್ತಿರುವ ಧ್ಯಾನ, ಯೋಗ, ಆಯುರ್ವೇದ ಇತ್ಯಾದಿಗಳು ಲಾಭದಾಯಕ ಉದ್ಯಮವಾಗುತ್ತಿವೆಯೇ ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೆ ಯೋಗವನ್ನು ಸ್ವಯಂ ಘೋಷಿತ ಬಾಬಾಗಳು, ದೇವಮಾನವರು, ಗುರುಗಳು ಹಣವ ಮಾಡುವ ದಂಧೆಯನ್ನಾಗಿಸಿಕೊಂಡಿದ್ದಾರೆ. ಇವರಿಗೆ ಪ್ರೋತ್ಸಾಹ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಯೋಗಕ್ಕೆ ಪ್ರಚಾರದ ರಾಯಭಾರಿಯಾಗಿದ್ದಾರೆ ಎಂದು ಅವರು ಆರೋಪಿಸಿದರು.
ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಹರಪ್ಪ, ಮೊಹೆಂಜದಾರೋ ಇತ್ಯಾದಿ ದ್ರಾವಿಡ ಸಂಸ್ಕೃತಿಗಳಲ್ಲಿ ಬಳಕೆ ಇದ್ದಿದ್ದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ, ನಂತರ ದಿನಗಳಲ್ಲಿ ಯೋಗವನ್ನು ವೈದಿಕೀಕರಣ ಮಾಡಲಾಗಿದೆ. ಹೀಗಾಗಿ ಇದನ್ನು ಪುನಃ ಆತ್ಮತೃಪ್ತಿಯ ಯೋಗವನ್ನಾಗಿ ಮಾಡಬೇಕಾದ ಅಗತ್ಯ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.
ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಪುರಾತನ ಕಾಲದಲ್ಲಿ ಯೋಗವು ಜನ ಸಮುದಾಯದಲ್ಲಿ ಸಾಮಾನ್ಯ ಭಾಗವಾಗಿತ್ತು. ಪ್ರತಿಯೊಬ್ಬರು ಧ್ಯಾನ ಮಾಡುವುದರ ಮೂಲಕ ದೈಹಿಕ ಆರೋಗ್ಯ ಹಾಗೂ ಸಮಾಜದ ಆರೋಗ್ಯಗಳೆರಡನ್ನು ಸಂಪಾದಿಸಿದ್ದರು. ಆದರೆ, ಈಗ ಯೋಗ ಕೆಲವರ ಸ್ವತ್ತಾಗಿದ್ದು, ಹಣ ಮಾಡುವ ದಂಧೆಯಾಗಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ವೇಣುಕಲ್ಲುಗುಡ್ಡದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕಲಿಗಣನಾಥ ಸ್ವಾಮೀಜಿ, ಫಕೀರ ಸ್ವಾಮೀಜಿ, ಸದಾಶಿವ ಯೋಗಗುರು ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News