×
Ad

ರಮಝಾನ್ ಎಲ್ಲರ ಜೀವನದಲ್ಲಿ ಸುಖ ನೆಮ್ಮದಿಗೆ ನಾಂದಿಯಾಗಲಿ

Update: 2016-06-24 16:15 IST

ಪವಿತ್ರ ರಮಝಾನ್ ತಿಂಗಳು ಬಂತೆಂದರೆ ಖುಷಿ, ಸಡಗರ. ಮನೆ ಮಸೀದಿಗಳು ಕಂಗೊಳಿಸುತ್ತವೆ. ಎಲ್ಲಾ ಕಡೆಯಲ್ಲಿ ಹಬ್ಬದ ವಾತಾವರಣ. ಇದೊಂದು ಅಲ್ಲಾಹನು ಅವನ ದಾಸರಿಗೆ ನೀಡಿದ ಅನುಗ್ರಹವಾಗಿದೆ. ರಮಝಾನ್ ನಲ್ಲಿ ಆಚರಿಸುವ ಉಪವಾಸ ನಮಗೆ ಬಡವರ ಬಗ್ಗೆ ಚಿಂತಿಸಲು ಅವಕಾಶ ನೀಡುತ್ತದೆ. ನಾವು ವರ್ಷವಿಡೀ ಹೊಟ್ಟೆ ತುಂಬಾ ಆಹಾರ ಸೇವಿಸಿದರೂ ಈ ಜಗತ್ತಿನಲ್ಲಿ ಅದೆಷ್ಟೋ ಮಕ್ಕಳು, ಮಹಿಳೆಯರು, ಬಡವರು, ವೃದ್ಧರು ಇಂದಿಗೂ ಒಂದು ತುತ್ತು ಅನ್ನಕ್ಕಾಗಿ ಅದೆಷ್ಟೋ ಕಸರತ್ತುಗಳನ್ನು ಮಾಡಬೇಕಾಗಿರುತ್ತದೆ. ನಾವು ಆಚರಿಸುವ ಉಪವಾಸ ಕೇವಲ ಬಾಹ್ಯವಾಗದೆ ಅಂತರಾಳದಿಂದ ಇರಬೇಕಾಗಿದೆ. ಎಲ್ಲರೂ ತನ್ನ ಮನಸ್ಸುಗಳನ್ನು ಶುದ್ದೀಕರಿಸುವತ್ತ ಗಮನ ಹರಿಸಬೇಕಾಗಿದೆ. ಇಂದು ಅದೆಷ್ಟೋ ಮುಸಲ್ಮಾನರು ಪರಸ್ಪರ ದ್ವೇಷವನ್ನು ಕಟ್ಟಿಕೊಳ್ಳುತ್ತಿದ್ದಾರೆ ಇದನೆಲ್ಲಾ ಮರೆತು ಸಹೋದರರಂತೆ ಬಾಳಲು ರಮಝಾನ್ ಸ್ಪೂರ್ತಿಯಾಗಲಿ ಎಂದು ನಾನು ಹಾರೈಸುತ್ತಿದ್ದೇನೆ. 

ನನ್ನ ರಮಝಾನ್ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲೇ ಬೆಳಗ್ಗಿನ ಜಾವದಿಂದ ಪ್ರಾರಂಭವಾಗುತ್ತದೆ.ನಂತರ ಸಹರಿ ಮುಗಿಸಿ ಮಸೀದಿಗೆ ತೆರಳುತ್ತೇನೆ. ನಮಾಝ್ ಮುಗಿಸಿ ಕುರ್ ಆನ್ ಪಾರಾಯಣ ಹಾಗೂ ತದನಂತರ ಊರಿನ ಸಹೋದರರೊಡನೆ ಬೆರೆತು ಕಷ್ಟ ಸುಖಗಳನ್ನು ಹಂಚುತ್ತೇವೆ. ಗ್ರಾಮ ಪಂಚಾಯತ್ ಸದಸ್ಯನಾಗಿರುವ ನಾನು ರಮಝಾನ್ ತಿಂಗಳಲ್ಲಿ ಸಮಾಜಸೇವೆಗೆ ಏನೂ ಅಡ್ಡಿ ಬರದಂತೆ ನೋಡಿಕೊಳ್ಳುತ್ತೇನೆ , ಮನೆ ಮನೆಗೆ ತೆರಳಿ ವೋಟರ್ ಐಡಿ , ಆಧಾರ್ ಕಾರ್ಡ್ , ವಿಧವಾ ವೇತನ, ಸ್ಕಾಲರ್ಶಿಪ್ ಅಭಿಯಾನ , ಸ್ಕೂಲ್ ಚಲೋ ಹಾಗೂ ನನ್ನ ವಾರ್ಡಿನಲ್ಲಿ ಸ್ವಚ್ಛತೆ , ರಸ್ತೆ , ತೋಡು , ದಾರಿ ದೀಪ ,ನೀರಿನ ಸಮರ್ಪಕ ವ್ಯವಸ್ಥೆ ಬಗ್ಗೆ ನೋಡಿಕೊಳ್ಳುತ್ತೇನೆ. ಇದು ನನ್ನ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. 

ಇಫ್ತಾರ್ ಮಸೀದಿಯಲ್ಲಿ ನೆರವೇರಿಸಿ ನಂತರ ಊರಿನ ಯುವಕರೊಡನೆ , ಹಿರಿಯರೊಡನೆ ಬೆರೆತುಕೊಳ್ಳುತ್ತೇನೆ ಇದು ನನಗೆ ಸಮಾಧಾನವನ್ನು ನೀಡುತ್ತದೆ. ತರಾವೀಹ್ ಬಳಿಕ ಕಳೆದ ವರ್ಷ ರಮಝಾನ್ ತಿಂಗಳಲ್ಲಿ ಇಹಲೋಕ ತ್ಯಜಿಸಿದ ಸಹೋದರ ರಮೀಜ್ ನೆನಪು ಈಗಲೂ ಕಾಡುತ್ತದೆ , ಅಲ್ಲಾಹನು ಆತನಿಗೆ ಸ್ವರ್ಗವನ್ನು ನೀಡಲಿ ಎಂದು ಪ್ರಾರ್ಥಿಸುವೆನು. 

ಈ ರಮಝಾನ್ ಎಲ್ಲರಲ್ಲೂ ಶಾಂತಿ ಸಮಾಧಾನ ಮೂಡಿಸಲಿ. ಶೋಷಿತರ, ಬಡವರ, ಮಕ್ಕಳ  ಮುಖದಲ್ಲಿ ಸಂತೋಷ ,ನಗುವನ್ನು ತರಲಿ ಎಂದು ಆಶಿಸುತ್ತೇನೆ. 

ನಝೀರ್ ಬಜ್ಪೆ (ಕಿನ್ನಿಪದವು)

ಗ್ರಾಮ ಪಂಚಾಯತ್ ಸದಸ್ಯರು

ಬಜ್ಪೆ ಗ್ರಾಮ ಪಂಚಾಯತ್ 

Writer - ನಝೀರ್ ಬಜ್ಪೆ

contributor

Editor - ನಝೀರ್ ಬಜ್ಪೆ

contributor