ಅಂತರ್ಜಾತಿ ವಿವಾಹವಾದ ಕಾರಣಕ್ಕೆ ನವದಂಪತಿಯನ್ನು ಉದ್ಯೋಗದಿಂದ ವಜಾಗೊಳಿಸಿದ ಬ್ಯಾಂಕ್
ಬೆಂಗಳೂರು, ಜೂ. 24: ಅಂತರಜಾತಿ ವಿವಾಹವಾದ ನವ ದಂಪತಿಗಳನ್ನು ಉದ್ಯೋಗದಿಂದ ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಗತಿಪರರು ಶುಕ್ರವಾರ ನಗರದ ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕ್ ಮುಂದೆ ಧರಣಿ ನಡೆಸಿದರು.
ಏಳು ತಿಂಗಳ ಹಿಂದೆ ಬೆಂಗಳೂರಿನ ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ನಲ್ಲಿ ದ್ವಿತೀಯ ದರ್ಜೆ ಸಹಾಯಕಿ ಉನ್ನತಿ ಎಂಬವರು, ಅದೇ ಬ್ಯಾಂಕ್‌ನ ಉದ್ಯೋಗಿ ರಾಕೇಶ್ ಅವರನ್ನು ಕಾನೂನುಬದ್ಧವಾಗಿ ವಿವಾಹವಾದರು. ಆದರೆ, ಬ್ಯಾಂಕ್‌ನ ಆಡಳಿತವು ನವದಂಪತಿಯನ್ನು ಕಾರಣ ಹೇಳದೆ, ಏಕಾಏಕಿ ಉದ್ಯೋಗದಿಂದ ವಜಾಗೊಳಿಸಿತ್ತು. ಈ ಸಂಬಂಧ ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಗತಿಪರರು ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಬೆಳಗ್ಗೆ 11:30ರ ಸುಮಾರಿಗೆ ನವದಂಪತಿ ಉನ್ನತಿ ಮತ್ತು ರಾಕೇಶ್, ಪ್ರಗತಿಪರರಾದ ಅಗ್ನಿಶ್ರೀಧರ್, ಇಂದೂಧರ ಹೊನ್ನಾಪುರ, ಅನಂತ್‌ನಾಯಕ್, ಡಾ.ವೆಂಕಟಸ್ವಾಮಿ, ಬಾನಂದೂರು ಕೆಂಪಯ್ಯ, ಕೃಷ್ಣಮಾಸಡಿ, ಶ್ರೀನಿವಾಸ ಕರಿಯಪ್ಪ, ಮಂಜುನಾಥ್ ಅದ್ದೆ, ವಿ.ನಾಗರಾಜ್ ಸೇರಿದಂತೆ ಪ್ರಮುಖರು ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ಭೇಟಿ ನೀಡಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ನವ ದಂಪತಿಗಳಿಗೆ ಸೋಮವಾರದಿಂದ ಉದ್ಯೋಗಕ್ಕೆ ಹಾಜರಾಗುವಂತೆ ಸೂಚಿಸಿದರು.
ಪ್ರಕರಣದ ಹಿನ್ನೆಲೆ:
ಏಳು ತಿಂಗಳ ಹಿಂದೆ ಮೊಗವೀರ ಸಮುದಾಯದ ರಾಕೇಶ್ ಬ್ರಾಹ್ಮಣ ಸಮುದಾಯದ ಉನ್ನತಿ ಎಂಬವರನ್ನು ಪ್ರೀತಿಸಿ ಕಾನೂನುಬದ್ಧವಾಗಿ ಮದುವೆಯಾಗಿದ್ದರು. ಆದರೆ, ಇವರಿಬ್ಬರು ಕೆಲಸ ಮಾಡುತ್ತಿದ್ದ ಬೆಂಗಳೂರಿನ ಹೊಟೇಲ್ ಉದ್ಯಮಿಗಳ ಸಹಕಾರಿ ಬ್ಯಾಂಕ್ ಆಡಳಿತವು ಏಕಾಏಕಿ ಉದ್ಯೋಗದಿಂದ ವಜಾ ಮಾಡಿತ್ತು ಎನ್ನಲಾಗಿದೆ.
ಹಾಲಂಬಿ ಕಾರಣ?
ರಾಕೇಶ್ ಪತ್ನಿ ಉನ್ನತಿ ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಸಹೋದರನ ಮಗಳು ಎಂದು ಗೊತ್ತಾಗಿದ್ದು, ಕೆಳಜಾತಿ ಯುವಕನನ್ನು ವಿವಾಹವಾದ ಕಾರಣ ಬ್ಯಾಂಕ್ ಆಡಳಿತಕ್ಕೆ ಒತ್ತಡ ಹಾಕಿ ಪುಂಡಲೀಕ ಹಾಲಂಬಿ ಅವರೇ ಉದ್ಯೋಗದಿಂದ ವಜಾಗೊಳಿಸಿದ್ದರು ಎಂದು ನವದಂಪತಿ ದೂರಿದ್ದಾರೆ.