ಮಾರಲು ಬಿಡುತ್ತಿಲ್ಲ... ಬದುಕಿಸಲು ನೀರಿಲ್ಲ...

Update: 2016-06-24 17:43 GMT

ಭೀಕರ ಕ್ಷಾಮ ಹಾಗೂ ಬರಕ್ಕೆ ಹೆಸರಾದ ಅತ್ಯಂತ ಬಡ ಹಾಗೂ ತೀರಾ ಒಣ ಪ್ರದೇಶ ಎನಿಸಿದ್ದ ಪಲಮು ಜಿಲ್ಲೆಯಿಂದ ಹೊಸದಾಗಿ ಪ್ರತ್ಯೇಕಿಸಲ್ಪಟ್ಟ ಜಿಲ್ಲೆ ಪಶ್ಚಿಮ ಜಾರ್ಖಂಡ್‌ನ ಲತೇಹಾರ್.

ನೇತರ್‌ಹಾತ್ ಬೆಟ್ಟದ ನೆರಳಲ್ಲಿ ಬರುವ ಪಲಮು ಜಿಲ್ಲೆ ಇದೇ ಕಾರಣಕ್ಕೆ ಉತ್ತಮ ಮಳೆಯಿಂದ ವಂಚಿತವಾಗಿದ್ದು, ಇದೀಗ ಭೀಕರ ಬರದಿಂದ ತತ್ತರಿಸಿದೆ. ಆದರೆ ಉತ್ತಮ ಅರಣ್ಯ ಪ್ರದೇಶ, ಹಲವಾರು ನದಿ- ತೊರೆಗಳನ್ನು ಹೊಂದಿರುವ, ಈ ಪ್ರದೇಶದಲ್ಲೆಲ್ಲ ಅತಿಹೆಚ್ಚು ತೇವಾಂಶ ಹೊಂದಿರುವ ಲತೇಹಾರ್ ಪ್ರದೇಶ ಕೂಡಾ ಈ ಬಾರಿ ಜಲಕ್ಷಾಮದಿಂದ ತತ್ತರಿಸಿದೆ.
ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲತೇಹಾರ್ ಜಿಲ್ಲೆಯ ಕೆರೆ- ತೊರೆಗಳು ಬತ್ತಿವೆ. ಜಿಲ್ಲೆಯಲ್ಲಿರುವ 12 ಸಾವಿರ ಕೈಪಂಪ್‌ಗಳ ಪೈಕಿ ಮೂರನೇ ಒಂದರಷ್ಟು ಕೆಲಸ ಮಾಡುತ್ತಿಲ್ಲ ಎಂದು ಜಿಲ್ಲಾಡಳಿತ ಹೇಳುತ್ತದೆ.
ಕೈಪಂಪ್‌ಗಳ ಸುತ್ತ ಮಹಿಳೆಯರು ಹಾಗೂ ಮಕ್ಕಳು ಗಂಟೆಗಟ್ಟಲೆ ಕಾದು ನೀರು ಒಯ್ಯುವ ದೃಶ್ಯವೇ ಭೀಕರ ಜಲಕ್ಷಾಮದ ಕಥೆ ಹೇಳುತ್ತದೆ. ಜತೆಗೆ ಮರಳುಗಾಡಿನಂತಾದ ಒಣಭೂಮಿಯಲ್ಲಿ ಕಳೆಗುಂದಿದ ಜಾನುವಾರುಗಳು ಎಲೆ- ಹುಲ್ಲಿಗಾಗಿ ಅಲೆದಾಡುತ್ತಿವೆ.

ಗ್ರಾಮದ ಮೂಲಕ ಹರಿಯುವ ಅರಗುಂಡಿ ನದಿಯ ಕಾರಣದಿಂದ ನದಿ ತೊಲ ಎಂದೇ ಗುರುತಿಸಲ್ಪಡುವ ಈ ಪುಟ್ಟ ಹಳ್ಳಿಯಲ್ಲೂ ನದಿ ಬತ್ತಿದೆ. ದಲಿತ ಬಹುಜನ ಕುಟುಂಬಗಳು ನದಿಪಾತ್ರದಲ್ಲಿ ಹೊಂಡಗಳನ್ನು ಅಗೆದು ಕುಡಿಯಲು, ಮನೆಬಳಕೆಗೆ ಹಾಗೂ ಜಾನುವಾರುಗಳಿಗೆ ನೀರು ಪಡೆಯಲು ಹರಸಾಹಸ ಪಡುತ್ತಿವೆ. ನಮ್ಮ ಹಳ್ಳಿಯಲ್ಲಿ ಎರಡು ಕೈಪಂಪ್‌ಗಳಿವೆ. ಆದರೆ ನೀರಿನ ಮಟ್ಟ ಕುಸಿದಿರುವುದರಿಂದ, ನಾವು ನೀರು ಪಡೆಯಲು ಎರಡು ಗಂಟೆ ಕಾಯಬೇಕಾಗುತ್ತದೆ ಎಂದು ಹೊಂಡದಲ್ಲಿದ್ದ ಅಲ್ಪಸ್ವಲ್ಪನೀರಿನಲ್ಲಿ ಮಗಳ ಸಹಾಯದಿಂದ ಬಟ್ಟೆ ಒಗೆಯುತ್ತಿದ್ದ ಚಾಂತಿ ಬೂಯಾನ್ ಚಿತ್ರಣವನ್ನು ವಿವರಿಸುತ್ತಾರೆ. ಸಣಕಲು ದನವೊಂದು ಪಕ್ಕದಲ್ಲೇ ತನ್ನ ಸರದಿಗಾಗಿ ಕಾಯುತ್ತಾ ನಿಂತಿತ್ತು. ಕಳೆದ ಮಾರ್ಚ್‌ನಲ್ಲಿ, ಇದೇ ಜಿಲ್ಲೆಯ ಬಲೂಮಥ್‌ನಿಂದ ಪಕ್ಕದ ಜಿಲ್ಲೆಯ ಜಾನುವಾರು ಸಂತೆಯಲ್ಲಿ ಮಾರಾಟ ಮಾಡಲು ಹಸುವನ್ನು ಕೊಂಡೊಯ್ಯುತ್ತಿದ್ದ ಜಾನುವಾರು ವ್ಯಾಪಾರಿ ಮಜ್ಲೂಮ್ ಅನ್ಸಾರಿ ಹಾಗೂ ಶಾಲೆಗೆ ಹೋಗುವ ಬಾಲಕ ಇಮ್ತಿಯಾಜ್ ಖಾನ್ ಅವರನ್ನು ಹತ್ಯೆ ಮಾಡಿ ಮರಕ್ಕೆ ನೇತುಹಾಕಲಾಗಿತ್ತು. ಈ ಹತ್ಯೆ ನಡೆದು ಹಲವು ವಾರಗಳ ಬಳಿಕ ಈ ಜಿಲ್ಲೆಯಲ್ಲಿ ಯಾರೂ ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವ ಧೈರ್ಯ ತೋರುತ್ತಿಲ್ಲ. ಒಂದು ವೇಳೆ ಮಾರಾಟ ಮಾಡುವ ಧೈರ್ಯ ಪ್ರದರ್ಶಿಸಿದರೂ, ಖರೀದಿ ಮಾಡುವವರಿಲ್ಲ.
ಮುಂಗಾರು ಆರಂಭವಾಗುವ ಮುನ್ನ ತೀರಾ ಕಡುಬೇಸಿಗೆಯಲ್ಲಿ ಸಾಮಾನ್ಯವಾಗಿ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಾರೆ. ಮತ್ತೆ ಮಳೆ ಆರಂಭವಾದಾಗ, ಹೊಲ ಉಳಲು ಹೊಸ ಜಾನುವಾರುಗಳನ್ನು ಖರೀದಿಸುತ್ತಾರೆ. ಇತರ ಕೆಲವರು ಹಣಕಾಸಿನ ಮುಗ್ಗಟ್ಟು ತಲೆದೋರಿದಾಗ, ತಮ್ಮ ಹಸು, ಎತ್ತುಗಳನ್ನು ಮಾರಾಟ ಮಾಡುತ್ತಾರೆ. ಅಂತೆಯೇ ಮದುವೆ, ಕೃಷಿ ಆದಾಯ ಇಲ್ಲದ ಸಂದರ್ಭ ಹೀಗೆ ಹಲವು ಕಷ್ಟದಾಯಕ ಪರಿಸ್ಥಿತಿಯಲ್ಲಿ ಜಾನುವಾರುಗಳು ಜನತೆಯ ಆದಾಯ ಮೂಲವಾಗುತ್ತವೆ. ಆದರೆ ಈ ಬಾರಿ ಜಾನುವಾರು ಮಾರಾಟ ಮಾಡಿದರೆ, ಎದುರಾಗುವ ಪರಿಣಾಮವನ್ನು ಊಹಿಸಿಯೇ ಯಾರೂ ಜಾನುವಾರು ಮಾರಾಟಕ್ಕೆ ಮುಂದಾಗಿಲ್ಲ.

‘‘ನನ್ನಲ್ಲಿ ನಾಲ್ಕು ಎತ್ತುಗಳಿವೆ. ಈ ಕಷ್ಟದ ತಿಂಗಳುಗಳನ್ನು ಕಳೆಯಲು ಅವುಗಳನ್ನು ನಾನು ಮಾರಾಟ ಮಾಡಲೇಬೇಕಿದೆ. ಆದರೆ ಖರೀದಿಸುವವರೇ ಇಲ್ಲ. ಹಾಗೊಂದು ವೇಳೆ ಮಾರಾಟ ಮಾಡಿದರೆ ಅಥವಾ ಖರೀದಿಸಿದರೆ, ಗಲ್ಲು ಶಿಕ್ಷೆಯಾಗುತ್ತದೆ. ಹಾಗಿದ್ದ ಮೇಲೆ ಯಾರು ತಾನೇ ಖರೀದಿಸುತ್ತಾರೆ’’ ಎಂದು ಬುಡಕಟ್ಟು ರೈತ ಬಾಬುಲಾಲ್ ಒರಾನ್ ಮುಗ್ಧವಾಗಿ ಪ್ರಶ್ನಿಸುತ್ತಾರೆ.
ಜಾನುವಾರು ವ್ಯಾಪಾರಿ ಅನ್ಸಾರಿ ಹತ್ಯೆ ನಡೆದ ನವಾಡ ಗ್ರಾಮಕ್ಕೆ ಹೊಂದಿಕೊಂಡಿರುವ ಅಮ್ವಟೋಲಿ ಎಂಬ ಹಳ್ಳಿಯಲ್ಲಿ ಬಾಬುಲಾಲ್‌ಒರಾನ್ ವಾಸವಿದ್ದಾರೆ. ಸ್ಥಳೀಯ ಗೋ ಸಂರಕ್ಷಣಾ ಗುಂಪು ಕಳೆದ ಎರಡು ವರ್ಷಗಳಿಂದ ಜಾನುವಾರು ಮಾರಾಟ ವಿರುದ್ಧ ಪ್ರಚಾರಾಂದೋಲನವನ್ನು ಇಲ್ಲಿ ಕೈಗೊಂಡಿದೆ.
ಹೊಲಗಳಲ್ಲಿ ಹುಲ್ಲು ಅಥವಾ ಎಲೆಗಳು ಕೂಡಾ ಇಲ್ಲ; ಗ್ರಾಮದ ಏಕೈಕ ಕೆರೆ ಬತ್ತುವ ಸ್ಥಿತಿಯಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಉಳಿಸಿಕೊಳ್ಳುವುದು ಕೂಡಾ ಕಷ್ಟಕರ. ಜಾನುವಾರುಗಳಿಗೆ ಮೇವು ಇಲ್ಲ. ಕೆರೆಯಲ್ಲಿ ಇರುವ ಅಲ್ಪಸ್ವಲ್ಪನೀರನ್ನು ಕುಡಿಯುವ ಆಸೆಯಿಂದ ಹೋಗುವ ದುರ್ಬಲ ಜಾನುವಾರುಗಳ ಕಾಲು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು ಅಲ್ಲೇ ಪ್ರಾಣ ಬಿಡುತ್ತವೆ ಎಂದು ಒರಾನ್ ವಿವರಿಸುತ್ತಾರೆ.
‘‘ಕೃಷಿಯೇ ಜೀವನಾಧಾರವಾಗಿರುವ ಈ ಹಳ್ಳಿಗಳಲ್ಲಿ ಬುಡಕಟ್ಟು ಗ್ರಾಮಸ್ಥರು ಹೆಚ್ಚುವರಿ ಆದಾಯಕ್ಕಾಗಿ ಸಾಮಾನ್ಯವಾಗಿ ಜಾನುವಾರುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಈಗ ಜಾನುವಾರು ಮಾರಾಟ ಮಾಡುವ ಧೈರ್ಯವನ್ನು ಯಾರೂ ತೋರುತ್ತಿಲ್ಲ’’ ಎಂದು ಸ್ಥಳೀಯ ಗುತ್ತಿಗೆದಾರ ವಿಜಯ್ ಒರಾನ್ ಹೇಳುತ್ತಾರೆ.
ನವಾಡ ಗ್ರಾಮದಲ್ಲಿ ಜಾನುವಾರು ಮಾರಾಟದಿಂದಲೇ ಜೀವನ ಕಂಡುಕೊಂಡಿದ್ದ ಸುಮಾರು 50 ಕುಟುಂಬಗಳು ಈಗ ಆ ಕೆಲಸ ತೊರೆದಿವೆ. ಬಹುತೇಕ ಯುವಕರು ಜಿಲ್ಲೆಯ ಇತರ ಕಡೆಗಳಿಗೆ ಹೋಗಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಯೂಬ್ ಅನ್ಸಾರಿ ಸಾಮಾನ್ಯವಾಗಿ ಯಾವಾಗಲೂ ಲತೇಹಾರ್‌ನಲ್ಲಿ ಜಾನುವಾರುಗಳನ್ನು ಖರೀದಿಸಿ, ಮುಂದಿನ ಜಿಲ್ಲೆಯಾದ ಛಾತ್ರಾದಲ್ಲಿ ಅಲ್ಪಲಾಭಕ್ಕೆ ಮಾರಾಟ ಮಾಡುತ್ತಿದ್ದರು. ಒಂದು ವಾರದ ಹಿಂದೆ ಹಿಂದೂ ಸಾಹು ಕುಟುಂಬ ಆತನನ್ನು ಸಂಪರ್ಕಿಸಿ, ಒಂದು ಕರುವನ್ನು ಮಾರಾಟ ಮಾಡಲು ಮುಂದಾಯಿತು. ಆದರೆ ಆ ವ್ಯವಹಾರ ಕುದುರಿಸಲಿಲ್ಲ. ನಾನು ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದಾದ ಮೇಲೆ ಖರೀದಿಸಿ ಏನು ಮಾಡಬೇಕು ಎಂದು ಅವರು ಪ್ರಶ್ನಿಸುತ್ತಾರೆ. ನಾನು ಅದನ್ನು ತಾಯಿತದಂತೆ ಕಟ್ಟಿಕೊಳ್ಳಲು ಸಾಧ್ಯವೇ ಎಂದು ನಾನು ಅವರನ್ನು ಪ್ರಶ್ನಿಸಿದೆ’’ ಎಂದು ಅನ್ಸಾರಿ ವಿವರಿಸುತ್ತಾರೆ.
ಇತರ ಹಲವು ಗ್ರಾಮಗಳಂತೆ ನವಡದಲ್ಲೂ ಹನಿ ನೀರಿಗೆ ಹಾಹಾಕಾರ ಎದ್ದಿದೆ. ಗ್ರಾಮದ ಒಂದು ಬಾವಿಯಲ್ಲಿ ಮಾತ್ರ ನೀರು ಇದ್ದು, ಇಡೀ ಗ್ರಾಮಸ್ಥರು ಹಾಗೂ ಜಾನುವಾರುಗಳು ಇದನ್ನೇ ಅವಲಂಬಿಸಿವೆ.
ಗ್ರಾಮಸ್ಥರು ಜಾನುವಾರುಗಳ ಹತ್ಯೆ ಮಾಡುವುದು ತಪ್ಪುಎಂದು ಪರಿಗಣಿಸುತ್ತಾರೆ. ಆದರೆ ಹಿಂದಿನಂತೆ ಮುಕ್ತವಾಗಿ ಬೇಕಾದ್ದನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ‘‘ಜಾನುವಾರುಗಳಿಗೆ ನೀರು ಅಥವಾ ಮೇವು ಇಲ್ಲದಿದ್ದರೂ, ಯಾರೂ ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವಂತಿಲ್ಲ’’ ಎಂದು ಬಲು ಗ್ರಾಮದ ಸಂಜಯ್ ಕುಜೂರ್ ಎಂಬ ಬುಡಕಟ್ಟು ಕ್ರೈಸ್ತ ರೈತ ಹೇಳುತ್ತಾರೆ. ಕಾಡಿಗೆ ಬೆಂಕಿ ಬೀಳುತ್ತಿದೆ. ಮರಗಳಲ್ಲಿ ಎಲೆಗಳೇ ಇಲ್ಲ. ಜಾನುವಾರುಗಳಿಗೆ ಮೇಯಲು ಏನೂ ಸಿಗುತ್ತಿಲ್ಲ. ಎಲ್ಲ ಹುಲ್ಲೂ ಒಣಗಿ ಹೋಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜಾನುವಾರುಗಳು ಸಾಯುತ್ತವೆ.

Writer - ಅನುಮೇಹ ಯಾದವ್

contributor

Editor - ಅನುಮೇಹ ಯಾದವ್

contributor

Similar News