ಕಾರವಾರ: ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪೆನಿಗೆ ದಂಡ
ಕಾರವಾರ, ಜೂ.25: ಕಳಪೆ ಗುಣಮಟ್ಟದ ಮೊಬೈಲ್ ಮಾರಾಟ ಮಾಡಿ ಗ್ರಾಹಕರನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಗ್ರಾಹಕ ವೇದಿಕೆ ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪೆನಿಗೆ ದಂಡ ವಿಧಿಸಿದೆ. ಶನಿವಾರ ಬೆಳಗ್ಗೆ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ಮೈಕ್ರೋಮ್ಯಾಕ್ಸ್ ಕಂಪೆನಿ ಪರ ವಕೀಲರು ಗ್ರಾಹಕರಿಗೆ ದಂಡದ ಮೊತ್ತವನ್ನು ಪರಿಹಾರ ರೂಪದಲ್ಲಿ ವಿತರಿಸಿದರು.
ಯಲ್ಲಾಪುರದ ನಕ್ಷತ್ರ ಮೊಬೈಲ್‌ನಲ್ಲಿ ತಟಗಾರ ಗ್ರಾಮದ ಜೋಗದಮನೆಯ ವಿನಾಯಕ ನಾರಾಯಣ ಭಟ್ ಎಂಬವರು 7,000 ಸಾವಿರ ರೂ. ನೀಡಿ ಮೈಕ್ರೊಮಾಕ್ಸ್ ಮೊಬೈಲ್ ಖರೀದಿಸಿದ್ದರು. ಆದರೆ ಮೊಬೈಲ್ ಗುಣಮಟ್ಟದಿಂದ ಕೂಡಿರಲಿಲ್ಲ. ಖರೀದಿಸಿದ ಮೊಬೈಲ್‌ಗೆ ಒಂದು ವರ್ಷದ ವಾರಂಟಿ ಇದ್ದು, ಎರಡು ಬಾರಿ ದುರಸ್ತಿ ಮಾಡಿಸಿದ್ದರೂ ಸರಿಯಾಗಿರಲಿಲ್ಲ. ಪರ್ಯಾಯವಾಗಿ ಗುಣಮಟ್ಟದ ಮೊಬೈಲ್ ವಿತರಿಸುವಂತೆ ವಿನಾಯಕ ಭಟ್ ಕೇಳಿದಾಗ ಅಂಗಡಿಯವರು ಹಾರಿಕೆ ಉತ್ತರ ನೀಡುತ್ತಿದ್ದರು. ಇದಾದ ನಂತರ ಕಂಪೆನಿಗೆ ದೂರಿದರೂ ಸೂಕ್ತ ಸ್ಪಂದನೆ ದೊರೆಯದ ಕಾರಣ ನ್ಯಾಯ ಕೋರಿ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿದ್ದರು.
ಮೊಬೈಲ್ ಅಂಗಡಿಯವರು ದುರಸ್ತಿಗೆಂದು ನೀಡಿದ ಮೊಬೈಲ್‌ನ್ನು ಸಕಾಲಕ್ಕೆ ಮರಳಿಸದೇ ಸೇವಾ ನ್ಯೂನ್ಯತೆ ಪ್ರದರ್ಶಿಸಿದ್ದರು. ಅದಾದ ನಂತರ ಮೊಬೈಲ್ ಹಿಂತಿರುಗಿಸದೇ ಮೋಸ ಮಾಡಲು ಯತ್ನಿಸಿದ್ದಾರೆ ಎಂದು ವಿನಾಯಕ ಭಟ್ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ವೇದಿಕೆ ಅಧ್ಯಕ್ಷ ವಿಶ್ವೇಶ್ವರ ಭಟ್, ಕಂಪೆನಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡರು. ದೂರುದಾರರಿಗೆ ಪರಿಹಾರ ರೂಪದಲ್ಲಿ 33,500 ರೂ. ವಿತರಿಸುವಂತೆ ಆದೇಶಿಸಿದ್ದರು. ಈ ಆದೇಶವನ್ನು ಉಲ್ಲಂಘಿಸಲು ಕಂಪೆನಿ ಯತ್ನಿಸಿದಾಗ ಕಾನೂನಿನಲ್ಲಿ ಅವಕಾಶ ಇರುವಂತೆ ಆದೇಶ ಉಲ್ಲಂಘನೆ ಮಾಡುವವರನ್ನು ಬಂಧಿಸಿ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ತಮಗೆ ಪರಿಹಾರ ವಿತರಿಸುವಂತೆ ದೂರುದಾರರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ವೇಳೆ ಹಾಜರಾದ ಮೈಕ್ರೊಮ್ಯಾಕ್ಸ್ ಕಂಪೆನಿ ಪರ ವಕಿಲರು ಪರಿಹಾರದ ಮೊತ್ತವನ್ನು ವಿತರಿಸಿದ್ದಾರೆ.