ಕಾರವಾರ: ಬಸ್ ಸಿಬ್ಬಂದಿ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ
ಕಾರವಾರ, ಜೂ.25: ಯುವಕರಿಬ್ಬರು ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ ಮತ್ತು ಕಂಡ್ಟಕರ್ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಶುಕ್ರವಾರ ತಡ ರಾತ್ರಿ ಸದಾಶಿವಗಢದಲ್ಲಿ ನಡೆದಿದೆ.
ಕಂಡಕ್ಟರ್ ಉದಯ ನಾಯ್ಕ, ಚಾಲಕ ಮೆಹಬೂಬ್ ಸಾಬ್ ಹಲ್ಲೆಗೊಳಗಾದ ನೌಕರರು.
ಸತ್ಯವಾನ ತಳೇಕರ್ ಹಲ್ಲೆ ನಡೆಸಿದ ವ್ಯಕ್ತಿ. ಕಾರವಾರದಿಂದ ದೇವಬಾಗಕ್ಕೆ ಹೊರಟಿದ್ದ ಬಸ್ ದೇವಬಾಗ ಕ್ರಾಸ್‌ನಲ್ಲಿ ಚಾಲಕ ಬಸ್ ತಿರುಗಿಸುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರನ್ನು ಬಸ್ ಮುಂದೆ ನಿಲ್ಲಿಸಿ ಜಗಳಕ್ಕೆ ಮುಂದಾಗಿದ್ದಾರೆ. ಬಸ್ ಚಾಲಕ ರಸ್ತೆಯ ಬದಿಗೆ ನಿಲ್ಲಿಸಿ ಕಾರಣ ಕೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿಗಳು ಡ್ರೈವರ್ ಹಾಗೂ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೈದ ವ್ಯಕ್ತಿಗಳ ವಿರುದ್ಧ ಬಸ್ ಚಾಲಕ ಮತ್ತು ಕಂಡಕ್ಟರ್ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರತಿಭಟನೆ
ಇದರಿಂದ ಆಕ್ರೋಶಗೊಂಡ ಕಾರವಾರ ಘಟಕದ ಸಿಬ್ಬಂದಿ ಶನಿವಾರ ಸ್ಥಳೀಯ ಬಸ್ ತಡೆದು ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕು. ಇಲ್ಲದ ಪಕ್ಷದಲ್ಲಿ ಪ್ರತಿಭಟನೆ ಮುಂದುವರೆಸಲಾಗುವುದು. ಸ್ಥಳಕ್ಕೆ ಆಗಮಿಸಿದ ಸಿಪಿಐ ಅವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಪುಡ್ತಾಡೊ, ಘಟಕದ ಉಪಾಧ್ಯಕ್ಷ ನಾಯ್ಕ, ಪಿ. ಪಿ. ನಾಯ್ಕ, ಚಂಡೇಕರ್ ಹಾಗೂ ಇನ್ನಿತರರು ಇದ್ದರು. ಸಧ್ಯ ಹಲ್ಲೆಗೊಳಗಾದ ಚಾಲಕ ಮೊಹಬೂಬ್ ಸಾಬ್ ಹಾಗೂ ಉದಯ ನಾಯ್ಕ ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.