×
Ad

ಕಾಂಗ್ರೆಸ್‌ನ ಭಿನ್ನಮತೀಯರಿಗೆ ಎಸ್.ಎಂ.ಕೃಷ್ಣರಿಂದ ಬೆಂಬಲ: ಎಚ್.ಡಿ. ದೇವೇಗೌಡ

Update: 2016-06-25 19:05 IST

ಹಾಸನ, ಜೂ.25: ರಾಜ್ಯ ಸರಕಾರಕ್ಕೆ ಶಿಕ್ಷೆ ಕೊಡುವ ಕಾಲ ಸನ್ನಿಹಿತವಾಗಿದ್ದು, ಜನತೆ ಬುದ್ಧಿ ಕಲಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಅವರು ಭಿನ್ನಮತೀಯರಿಗೆ ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ರಂಗಪ್ರವೇಶ ಮಾಡಿದ್ದಾರೆ ಎಂದರು.

ನಾನು ಬೆಳಗಾಂನಲ್ಲಿ ಪ್ರವಾಸ ಮಾಡಿ ಬಂದಿದ್ದು, ಅಲ್ಲಿನ ಸ್ಥಿತಿ ಗಮನಿಸಿದರೆ ನನಗೆ ಬೇಸರ ಆಗುತ್ತದೆ. ಸಮರ್ಪಕವಾಗಿ ಕುಡಿಯುವ ನೀರು ಇಲ್ಲ. ನನ್ನಾವಧಿಯಲ್ಲಿ ಮಾಡಲಾದ ಏತ ನೀರಾವರಿ ಕೂಡ ತುಕ್ಕು ಹಿಡಿದಿದೆ. ಆದರೆ ಅಲ್ಲಿನ ಜನರು ನನ್ನ ಮೇಲೆ ವಿಶ್ವಾಸವನ್ನು ಇಟ್ಟಿದ್ದಾರೆ. ಇನ್ನು ಚಿಕ್ಕಬಳ್ಳಾಪುರದಲ್ಲೂ ಅದೆ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಆಗುವುದನ್ನು ರಾಜ್ಯದ ಜನತೆ ನೋಡಲಿದ್ದಾರೆ ಎಂದರು.

ನಾವು ಶ್ರೀನಿವಾಸ್ ಪ್ರಸಾದ್ ಮತ್ತು ಅಂಬರೀಷ್ ಜೊತೆ ಮಾತುಕತೆ ನಡೆಸಿದ್ದೇವೆ ಅಷ್ಟೆ, ಮತ್ಯಾವ ವಿಚಾರವಿಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ರಾಜ್ಯ ಸರಕಾರಕ್ಕೆ ಜನತೆ ಶಿಕ್ಷೆ ಕೊಡುವ ಕಾಲ ಬರುತ್ತದೆ. ಜನ ಬುದ್ಧಿ ಕಲಿಸಲಿದ್ದಾರೆ ಎಂದು ತಿಳಿಸಿದರು. ಪ್ರಸ್ತುತ ರಾಜಕೀಯ ನೋಡಿದರೆ ಯಾವ ಘಟ್ಟಕ್ಕೆ ಮುಟ್ಟುತ್ತದೆಯೋ ಗೊತ್ತಿಲ್ಲ. ಭಿನ್ನರ ಸಭೆ ರವಿವಾರ ನಡೆಯುವುದರಿಂದ ನಾನು ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ದ್ವೇಷದ ರಾಜಕಾರಣ ಸರಿಯಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಷ್ಟ್ರಗಳನ್ನು ಸುತ್ತಿ ಬಂದಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ಬಂದರೂ ಇದುವರೆಗೂ ಸಮಸ್ಯೆ ಬಗೆಹರಿಸಿಲ್ಲ. ಮೊದಲು ದೇಶದ ಒಳಗಿನ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಸರಕಾರದ ಪರಿಸ್ಥಿತಿ ತಲೆ ತಗ್ಗಿಸುವ ರೀತಿ ಇದೆ. ಇದುವರೆಗೂ ರೈತರ ಒಂದು ಸಮಸ್ಯೆಯನ್ನು ಬಗೆಹರಿಸದೆ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿದ್ದಾರೆ. ಇನ್ನೊಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವರು ರಾಜಕೀಯ ಬಿಟ್ಟರೇ ಯಾವ ಸಾಧನೆಯನ್ನೂ ಮಾಡಿಲ್ಲ. ಆದರೆ ಎಚ್.ಡಿ. ರೇವಣ್ಣ ಮಂತ್ರಿಯಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಎಲ್ಲವನ್ನು ಜನತೆ ವೀಕ್ಷಣೆ ಮಾಡುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಕಬ್ಬು ಇತರೆ ಬೆಳೆಗಳಿಗೆ ಬೆಲೆ ಕುಸಿದು ರೈತರು ಸಂಕಷ್ಟದಲ್ಲಿದ್ದಾರೆ. ಇದಕ್ಕೆ ಸರಕಾರದ ಆಮದು ಮತ್ತು ರಪ್ತು ನೀತಿಯೇ ಕಾರಣ ಎಂದು ದೂರಿದರು. ಇನ್ನು ಆಲೂಗೆಡ್ಡೆ ಬೆಳೆ ಶೇ.15 ರಷ್ಟು ಬಿತ್ತನೆ ಆಗಿರುವುದಿಲ್ಲ. ರೈತರು ಬೆಳೆದ ಆಲುಗೆಡ್ಡೆ ನಷ್ಟವಾದರೂ ಇದುವರೆಗೂ ಸರಕಾರ ಪರಿಹಾರ ನೀಡಿಲ್ಲ ಎಂದರು. ಈ ವೇಳೆ ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News