ತೆಂಗು, ಅಡಿಕೆ ಬೆಳೆಗಾರರ ರಕ್ಷಣೆಗೆ ಆಗ್ರಹಿಸಿ ರೈತರಿಂದ ರ್ಯಾಲಿ
ಬೆಂಗಳೂರು, ಜೂ. 25: ಕೂಡಲೇ ತೆಂಗು ಮತ್ತು ಅಡಿಕೆ ಮಂಡಳಿಯನ್ನು ಸ್ಥಾಪಿಸಿ, ಎಲ್ಲಾ ಕಾಲಕ್ಕೂ ಸ್ಥಿರ ಬೆಲೆಯನ್ನು ಕಾಪಾಡಲು ಸೂಕ್ತ ನೀತಿ ರೂಪಿಸಿ, ತೆಂಗು, ಅಡಿಕೆ, ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಇಂದು ರೈತರು ಬೃಹತ್ ರ್ಯಾಲಿ ನಡೆಸಿದರು.
ನಗರದ ಕೇಂದ್ರ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ನಾನಾ ಭಾಗಗಳಿಂದ ನಗರಕ್ಕೆ ಆಗಮಿಸಿದ ಸಾವಿರಾರು ಅಡಿಕೆ, ತೆಂಗು, ದಾಳಿಂಬೆ, ದ್ರಾಕ್ಷಿ ಬೆಳೆಗಾರರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆ ನಂತರ ಸ್ವಾತಂತ್ರ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹಾಗೂ ರಾಜ್ಯ ರೈತ ಸಂಘ ಹಸಿರು ಸೇನೆಯ ಮುಖಂಡರಾದ ಕೆ.ಎಸ್. ಪುಟ್ಟಣ್ಣಯ್ಯನವರು ರಾಜ್ಯದ ಅಡಿಕೆ, ತೆಂಗು, ದಾಳಿಂಬೆ, ದ್ರಾಕ್ಷಿ ಬೆಳೆಗಾರರನ್ನು ಸಂರಕ್ಷಿಸಲು ಕ್ರಮ ತೆಗೆದುಕೊಳ್ಳಬೇಕು. ಕೂಡಲೇ ದೊಡ್ಡ ಮಟ್ಟದ ಆವರ್ತ ನಿಧಿಯನ್ನು ಸ್ಥಾಪಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ತೆಂಗು ಮತ್ತು ಅಡಿಕೆ ಮರಗಳನ್ನು ರಕ್ಷಿಸಲು ಹನಿ ನೀರಾವರಿ ಯೋಜನೆಗೆ ಆದ್ಯತೆ ನೀಡಬೇಕು. ಎಲ್ಲಾ ವರ್ಗದ ರೈತರಿಗೆ ಶೇಕಡಾ 90ರಷ್ಟು ಸಬ್ಸಿಡಿ ನೀಡಬೇಕೆಂದು ಒತ್ತಾಯಿಸಿದರು. ಆರೋಗ್ಯಕ್ಕೆ ಮಾರಕವಾಗಿರುವ ಪೆಪ್ಸಿ-ಕೋಲಾ ಸಂಸ್ಥೆಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ತೆಂಗು ಪಾನೀಯವನ್ನು ಉತ್ತೇಜಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದ 12 ಜಿಲ್ಲೆಗಳಲ್ಲಿ 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 12 ಕೋಟಿಗೂ ಅಧಿಕ ತೆಂಗಿನ ಮರಗಳಿವೆ. ಇಷ್ಟೇ ಪ್ರಮಾಣದಲ್ಲಿ ಅಡಿಕೆಯ ಮರಗಳಿವೆ. ಕಳೆದ 3 ವರ್ಷಗಳಿಂದ ತೆಂಗು ಮತ್ತು ಅಡಿಕೆ ಮರಗಳು ಬರಗಾಲದಿಂದಾಗಿ ಒಣಗಿ ನಿಂತಿವೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದು, ಅವರ ಜೀವನ ಅತಂತ್ರದಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಲೇ ಬೆಳೆಗಾರರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ರೈತ ಮುಖಂಡ ಚಾಮರಸ ಮಾಲೀ ಪಾಟೀಲ್ ಮಾತನಾಡಿ, ತೆಂಗಿಗೆ ಟನ್ ಒಂದಕ್ಕೆ 25,000 ಕನಿಷ್ಠ ಬೆಲೆ, ಕೊಬ್ಬರಿಗೆ ಕ್ವಿಂಟಾಲ್ಗೆ 15,000 ರೂ. ಹಾಗೂ ಎಳನೀರಿಗೆ ಕನಿಷ್ಠ 15 ರೂ. ಸ್ಥಿರ ಬೆಲೆ ಹಾಗೂ ಅಡಿಕೆಗೆ ಕ್ವಿಂಟಾಲ್ ಒಂದಕ್ಕೆ 35,000 ದಿಂದ 45,000 ರೂ. ವರೆಗೆ ಸ್ಥಿರ ಬೆಲೆಯನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ಆಯವ್ಯಯದಲ್ಲಿ ನೀರಾ ನೀತಿಯನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ತೆಂಗಿನ ಮರಗಳಿಂದ ನೀರಾ ಇಳಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.
ರೈತರ ಬಂಧನವಿಲ್ಲ
ಪ್ರತಿಭಟನೆಯಲ್ಲಿ ಸಾವಿರಾರು ರೈತರು ಜಮಾ ಯಿಸಿದ್ದರಿಂದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಪರಿಸ್ಥಿತಿ ಕೈಮೀರಬಹುದು ಎಂದು ಮುಂದಾಲೋಚನಾ ಕ್ರಮವಾಗಿ ಪ್ರತಿಭಟನೆಯನ್ನು ಕೈ ಬಿಡುವಂತೆ ರೈತ ಮುಖಂಡರನ್ನು ಮನವೊಲಿಸಲು ನೋಡಿದರು. ಒಪ್ಪದಿದ್ದಾಗ ಪ್ರತಿಭಟನಾಕಾರರನ್ನು ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು. ಈ ಸಂದರ್ಭದಲ್ಲಿ ಕೆಲ ರೈತರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ವದಂತಿ ಹರಿದಾಡಿದ ಪರಿಣಾಮ ಪ್ರತಿಭಟನಾಕಾರರಲ್ಲಿ ಆತಂಕ ಮೂಡಿಸಿತ್ತು. ನಂತರ ನೈಜ ಪರಿಸ್ಥಿತಿಯನ್ನು ನೆರೆದಿದ್ದ ಪ್ರತಿಭಟನಾಕಾರರಿಗೆ ತಿಳಿಸಿದ ರೈತ ಮುಖಂಡರು ಗೊಂದಲವನ್ನು ನಿವಾರಿಸಿದರು.
ಮದ್ದೂರಿಗೆ ಮುಟ್ಟಿದ ವದಂತಿ:ರೈತರ ಬಂಧನ ವದಂತಿ ಮದ್ದೂರಿನ ರೈತರನ್ನು ಕೆರಳಿಸಿ, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲನ್ನು ತಡೆದು ಪ್ರತಿಭಟನೆ ನಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ರೈಲು ತಡೆದು ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ನೈಜ ಪರಿಸ್ಥಿತಿಯನ್ನರಿತ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.