×
Ad

ಪೌರಕಾರ್ಮಿಕರನ್ನುಮ್ಯಾನ್‌ಹೋಲ್‌ಗೆ ಇಳಿಸಿ ಸ್ವಚ್ಛತೆ

Update: 2016-06-26 23:20 IST

ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ರಣದೀಪ್
ಬೆಂಗಳೂರು, ಜೂ. 26: ಸುಪ್ರೀಂ ಕೋರ್ಟ್‌ನ ಆದೇಶವನ್ನು ಗಾಳಿಗೆ ತೂರಿ ಸಫಾಯಿ ಕರ್ಮಚಾರಿಗಳನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಸ್ವಚ್ಛ ಮಾಡಿಸಿರುವ ಪ್ರಕರಣ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.
ರವಿವಾರ ವಿಜಯಪುರ ಮಹಾ ನಗರ ಪಾಲಿಕೆಯಿಂದಲೇ ಮ್ಯಾನ್‌ಹೋಲ್ ಸ್ವಚ್ಛತೆ ಯಂತ್ರಗಳ ಬದಲಿಗೆ ಪೌರ ಕಾರ್ಮಿಕ ರನ್ನು ಬಳಸಿಕೊಳ್ಳುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ. ನಾಲ್ಕೈದು ಮಂದಿ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಶೌಚ ಗುಂಡಿಯನ್ನು ಸ್ವಚ್ಛ ಮಾಡಿಸಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಈ ಸುದ್ಧಿ ಖಾಸಗಿ ಸುದ್ಧಿ ವಾಹಿನಿಗಳಲ್ಲಿ ಬಿತ್ತರಗೊಂಡ ಕೂಡಲೇ ಎಚ್ಚೆತ್ತ ಮಹಾ ನಗರ ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರ ಲೋಪದಿಂದ ಈ ಘಟನೆ ನಡೆದಿದೆ ಎಂದು ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಈ ಮಧ್ಯೆಯೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ. ಇತ್ತೀಚೆಗೆ ದೊಡ್ಡಬಳ್ಳಾಪುರ ನಗರದಲ್ಲಿ ಮ್ಯಾನ್‌ಹೋಲ್‌ಗೆ ಸ್ವಚ್ಛತೆಗೆ ಇಳಿದಿದ್ದ ಇಬ್ಬರು ಪೌರ ಕಾರ್ಮಿಕರು ಸೇರಿದಂತೆ 4 ಮಂದಿ ಸಾವನ್ನಪ್ಪಿದ್ದರು. ಪ್ರಕರಣ ಜನರ ನೆನಪಿನಿಂದ ಮಾಸುವ ಮುನ್ನವೇ ವಿಜಯಪುರದಲ್ಲಿ ಪೌರ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಶುಚಿಗೊಳಿಸಿರುವುದು ಬೆಳಕಿಗೆ ಬಂದಿದೆ.
ತನಿಖೆಗೆ ಆದೇಶ: ಕಾನೂನು ಬಾಹಿರವಾಗಿ ಸಫಾಯಿ ಕರ್ಮಚಾರಿಗಳನ್ನು ಮ್ಯಾನ್ ಹೋಲ್‌ಗೆ ಇಳಿಸಿರುವ ಪ್ರಕರಣ ಕುರಿತು ತನಿಖೆಗೆ ಆದೇಶ ನೀಡಲಾಗಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರದ ಜಿಲ್ಲಾಧಿಕಾರಿ ರಣದೀಪ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News