×
Ad

ಹಾಸನ: ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ

Update: 2016-06-27 19:45 IST

ಹಾಸನ, ಜೂ.27: ಬೆಳೆಗಳ ಬೆಲೆ ಇಳಿಕೆ ಖಂಡಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ರೈತ ಸಂಘದಿಂದ ಕರೆ ನೀಡಲಾಗಿದ್ದ ಹಾಸನ್ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಭಾರತ ಸರಕಾರದ ತಪ್ಪು ನೀತಿಯಿಂದ ಕಾಯಿ, ಕೊಬ್ಬರಿ, ಆಲೂಗೆಡ್ಡೆ, ಕಬ್ಬು, ಹೆಸರುಕಾಳು, ಶುಂಠಿ, ಜೋಳ, ರೇಷ್ಮೆ ಇವುಗಳ ಬೆಲೆಯನ್ನು ಇಳಿಸಲಾಗಿದೆ. ಆಲೂಗೆಡ್ಡೆ ಬೆಳೆ ವಿಮೆಗೆ 10 ವರ್ಷಗಳಿಂದ ಹಣ ಕಟ್ಟಿಸಿಕೊಂಡು ಬೆಳೆ ಪರಿಹಾರವನ್ನು ಇದುವರೆಗೂ ರೈತರಿಗೆ ನೀಡಲಾಗಿಲ್ಲ ಎಂದು ದೂರಿದರು. ಪ್ರಸ್ತುತ ಮಳೆಗಾಲದಲ್ಲಿ ರೈತರು ಕಂಗಾಲಾಗಿದ್ದಾರೆ. ತಕ್ಷಣ ಸರಕಾರ ಸೂಕ್ತ ಕ್ರಮ ಕೈಗೊಂಡು ಮತ್ತು ರೈತರ ಸಂಪೂರ್ಣ ಸಾಲ ಮನ್ನ ಮಾಡಲು ಆಗ್ರಹಿಸಿದರು.

ತೆಂಗಿನ ಕಾಯಿ ಬೆಲೆಯು ಕಳೆದ 35 ವರ್ಷಗಳಿಗೆ ಹೋಲಿಸಿದರೆ ಇಂದಿಗೂ ಯಾವುದೇ ವ್ಯತ್ಯಾಸವಿಲ್ಲದೆ ಬೆಲೆ ಕುಸಿತವಾಗಿದೆ. ನುಸಿಪೀಡೆಯಂತಹ ಮಾರಕರೋಗಕ್ಕೆ ತುತ್ತಾಗಿ, ರಾಜ್ಯದ 13 ಜಿಲ್ಲೆಗಳಲ್ಲಿ ತೆಂಗು ಬೆಳೆಗಾರರು ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಮಲೇಷ್ಯ, ಇಂಡೋನೇಷ್ಯ ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಿಂದ ಅಡಿಕೆ ಮತ್ತು ತೆಂಗನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ತೀವ್ರ ಹಿನ್ನಡೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬೇಳೆ ಕಾಳುಗಳು ಹಾಗೂ ತರಕಾರಿಗಳ ಬೆಲೆ ದುಬಾರಿಯಾಗಿದ್ದು, ಇದಕ್ಕೆ ರಫ್ತು ನೀತಿಗಳೆ ಕಾರಣ ಎಂದು ದೂರಿದರು. ತೊಗರಿ ಬೇಳೆ ಕ್ವಿಂಟಾಲ್‌ಗೆ 5 ಸಾವಿರ ರೂ.ಗೆ ರೈತರಿಂದ ಖರೀದಿ ಮಾಡಿ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 160 ರಿಂದ 180ಕ್ಕೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರ ಜೇಬಿಗೆ ಕತ್ತರಿ ಹಾಕಿ ರೈತನಿಗೆ ಪದೆ ಪದೆ ನಷ್ಟ ಉಂಟು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಭಾರತ ದೇಶದ ಆರ್ಥಿಕ ನೀತಿ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಇರುವುದು ಕಂಡು ಬಂದಿದೆ ಎಂದು ರೈತರು ಆರೋಪಿಸಿದರು.

ಹಾಸನ್ ಬಂದ್‌ಗೆ ಸಹಕಾರ ಕೊಡುವಂತೆ ಪ್ರಚಾರ ಮಾಡಲಾಗಿದ್ದರೂ ನಗರದ ಮುಖ್ಯ ರಸ್ತೆಗಳಲ್ಲಿ ಬಿಟ್ಟರೆ ಉಳಿದ ಕಡೆ ಅಷ್ಟೊಂದು ಬಂದ್‌ನ ಬಿಸಿ ಮುಟ್ಟಲಿಲ್ಲ. ರೈತರು ಮೆರವಣಿಗೆ ನಡೆಸುವಾಗ ಬಾಗಿಲು ಹಾಕದ ಅಂಗಡಿಗಳಿಗೆ ತೆರಳಿ ಬಲವಂತವಾಗಿ ಮುಚ್ಚಿಸಲಾಯಿತು. ನಗರದ ಸಹ್ಯಾದ್ರಿ ಚಿತ್ರಮಂದಿರದ ಬಳಿ ಫಿಜಾ ವ್ಯಾಪಾರ ಮಳಿಗೆಯವರು ಬಾಗಿಲು ಹಾಕದೆ ವ್ಯಾಪಾರ ಮಾಡುತ್ತಿದ್ದಾಗ ರೈತರು ಬಲವಂತವಾಗಿ ರೈತರು ಅಂಗಡಿ ಮುಚ್ಚಿಸಲು ಮುಂದಾದಾಗ ಪೊಲೀಸ್ ಅಧಿಕಾರಿಗಳು ತಡೆದು ನಂತರ ರೈತರನ್ನು ಹೊರಕ್ಕೆ ಕಳುಹಿಸಿದ ಪ್ರಸಂಗವೂ ನಡೆಯಿತು. ಈ ವೇಳೆ ಕೆಲ ಸಮಯ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ಕಾರ್ಯದರ್ಶಿ ಅನೆಕೆರೆ ರವಿ, ಸಂಚಾಲಕ ಮೀಸೆ ಮಂಜಣ್ಣ, ಜಿಲ್ಲಾ ಖಜಾಂಚಿ ರಾಜಣ್ಣ, ಸಂಘದ ಜಿಲ್ಲಾಧ್ಯಕ್ಷ ಬಾಬು, ಮಂಜಣ್ಣ, ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News