ಮನುಷ್ಯ ತನ್ನ ಶರೀರದ ಸ್ವಚ್ಛತೆಗೆ ಕೊಡುವಷ್ಟೇ ಆದ್ಯತೆಯನ್ನು ಸಮಾಜದ ಸ್ವಚ್ಛತೆಗೆ ನೀಡಬೇಕು: ವಿ. ಶಂಕರ್
ಶ್ರೀನಿವಾಸಪುರ, ಜೂ.27: ಮನುಷ್ಯ ತನ್ನ ಶರೀರದ ಸ್ವಚ್ಛತೆಗೆ ಕೊಡುವಷ್ಟೇ ಆದ್ಯತೆಯನ್ನು ತನ್ನ ಸುತ್ತಮುತ್ತಲಿನ ಸಮಾಜದ ಸ್ವಚ್ಛತೆಗೆ ನೀಡಬೇಕು. ಅದರಲ್ಲೂ ಯುವಕರು ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಟ್ಟರೆ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಪುರಸಭಾ ಸದಸ್ಯ ವಿ.ಶಂಕರ್ ತಿಳಿಸಿದರು.
ಪಟ್ಟಣದ ಮಾರುತಿ ನಗರ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯ ಉತ್ತಮ ಆರೋಗ್ಯವಂತನಾಗಿ ಜೀವಿಸಬೇಕಾದರೆ ತಾನು ವಾಸಿಸುವ ಸುತ್ತ ಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಯುವಕರು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ ಯುವಕರನ್ನು ಪ್ರೋತ್ಸಾಹಿಸಿ ಸ್ವಚ್ಛತೆಯ ಕಾರ್ಯದಲ್ಲಿ ಭಾಗವಹಿಸಲು ಸಹಕಾರಿಯಾಗಬೇಕು ಎಂದರು.
ಮನುಷ್ಯ ತನ್ನ ಜೀವನದ ನೀರು, ಗಾಳಿ, ಆಹಾರಕ್ಕೆ ಕೊಡುವಷ್ಟು ಪ್ರಾಶಸ್ತ್ಯವನ್ನೇ ಸ್ವಚ್ಛತೆಗೂ ಕೊಟ್ಟರೆ ಮನುಷ್ಯ ಎಲ್ಲಾ ರೋಗ ರುಜಿನಗಳಿಂದ ದೂರವಿರಬಹುದು. ಅದಕ್ಕಾಗಿಯೇ ಮಾನವರು ಸ್ವಚ್ಛತೆಯನ್ನು ತಮ್ಮ ಜೀವನದಲ್ಲಿ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಮಂಜುಳಾ ಸ್ವಚ್ಛತಾ ಕಾರ್ಯದ ನೇತೃತ್ವವನ್ನು ವಹಿಸಿದ್ದರು. ಪಟ್ಟಣದ ಗಂಗೋತ್ರಿ ಹಾಗೂ ಸರಕಾರಿ ಬಾಲಕಿಯರ ಕಾಲೇಜಿನ ವಿದ್ಯಾರ್ಥಿಗಳು ಹಾಗು ಮಾರುತಿ ನಗರದ ಯುವಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಬಡಾವಣೆಯಲ್ಲಿನ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು.