×
Ad

ಉಬರ್ ಇಂಡಿಯಾದ ಪ್ರಪ್ರಥಮ ಮಹಿಳಾ ಟ್ಯಾಕ್ಸಿ ಚಾಲಕಿ ಶವವಾಗಿ ಪತ್ತೆ

Update: 2016-06-28 11:27 IST

ಬೆಂಗಳೂರು, ಜೂ.28: ಉಬರ್ ಇಂಡಿಯಾದ ಪ್ರಪ್ರಥಮ ಮಹಿಳಾ ಟ್ಯಾಕ್ಸಿ ಚಾಲಕಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೀರತ್ ಭಾರತಿ ಬೆಂಗಳೂರು ಉತ್ತರದ ನಾಗಶೆಟ್ಟಿಹಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಸೋಮವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ.

ನೆರೆಮನೆಯವರು ಭಾರತಿ (39) ಅವರ ಶವವನ್ನು ನೇಣು ಬಿಗಿದ ಸ್ಥಿತಿಯಲ್ಲಿ ಸುಮಾರು 7 ಗಂಟೆಗೆ ನೋಡಿದ ನಂತರ ಪೊಲೀಸರಿಗೆ ಮಾಹಿತಿ ರವಾನಿಸಲಾಯಿತು. ಮೂಲತಃ ತೆಲಂಗಾಣದ ವಾರಂಗಲ್‌ನವರಾಗಿರುವ ಭಾರತಿ ಬೆಂಗಳೂರಿನ ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಹೊರನೋಟಕ್ಕೆ ಭಾರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಯುವುದಾದರೂ ಆಕೆ ಯಾವುದೇ ಡೆತ್ ನೋಟನ್ನು ಬರೆದಿಟ್ಟಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಭಾರತಿ ಮನೆಯವರಿಗೆ ವಿಚಾರವನ್ನು ತಿಳಿಸಲಾಗಿದ್ದು ಅವರು ಬೆಂಗಳೂರಿಗೆ ಹೊರಟಿದ್ದಾರೆಂದು ತಿಳಿದು ಬಂದಿದೆ.

2013 ರಲ್ಲಿ ಉಬರ್ ಇಂಡಿಯಾದ ಪ್ರಥಮ ಮಹಿಳಾ ಚಾಲಕಿಯಾದಾಗ ಆಕೆ ಸಾಕಷ್ಟು ಸುದ್ದಿ ಮಾಡಿದ್ದರು. ವಾರಂಗಲ್‌ನಿಂದ ಬೆಂಗಳೂರಿಗೆ 2005 ರಲ್ಲಿ ಉದ್ಯೋಗ ಅರಸಿ ಬಂದಿದ್ದ ಭಾರತಿ ಸ್ವಲ್ಪ ಕಾಲ ಟೈಲರಿಂಗ್ ಕೆಲಸ ಮಾಡಿ ನಂತರ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ದುಡಿದಿದ್ದರು. ಮುಂದೆ 2007ರಲ್ಲಿ ಎನ್ ಜಿ ಒ ಒಂದರ ಸಹಾಯದೊಂದಿಗೆ ವಾಹನ ಚಾಲನೆಯನ್ನು ಕಲಿತ ಅವರು ಫೋರ್ಡ್ ಫಿಯೆಸ್ಟಾ ವಾಹನವನ್ನೂ ಖರೀದಿಸಿದ್ದರು.

ಮಧ್ಯಾಹ್ನ 12 ರಿಂದ ತಡ ರಾತ್ರಿ ಒಂದು ಗಂಟೆಯವರೆಗೂ ಕೆಲಸ ಮಾಡುತ್ತಿದ್ದ ಭಾರತಿ ಹೆಚ್ಚೆಚ್ಚು ಮಹಿಳೆಯರು ಚಾಲಕಿಯರಾಗಬೇಕೆಂದು ಹೇಳುತ್ತಿದ್ದರು. ಮೂಲಗಳ ಪ್ರಕಾರ ಭಾರತಿ ಇತ್ತೀಚೆಗೆ ತಮ್ಮ ಹುಟ್ಟೂರಿಗೆ ಮರಳುವ ಬಗ್ಗೆ ಯೋಚಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News