×
Ad

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಿಗೆ ಮೂರು ತಿಂಗಳಲ್ಲಿ ಜಾಗ ನೀಡಿ: ಡಿಸಿಗಳಿಗೆ ಸಿಎಂ ಆದೇಶ

Update: 2016-06-28 11:47 IST

ಬೆಂಗಳೂರು, ಜೂ.28: ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಕಟ್ಟಡಗಳಿಗೆ 3 ತಿಂಗಳೊಳಗೆ ಜಾಗ ನೀಡಬೇಕು ಎಂದು ರಾಜ್ಯದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಳು ಹಾಗೂ ಪ್ರಾದೇಶಿಕ ಅಯುಕ್ತರ ಎರಡನೆ ದಿನದ ಸಮ್ಮೇಳನದಲ್ಲಿ ಮಾತನಾಡಿದ ಸಿಎಂ, ನವೆಂಬರ್ ತಿಂಗಳಲ್ಲಿ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಅಷ್ಟರಲ್ಲಿ ಜಾಗ ಕೊಟ್ಟಿರಬೇಕು. ಇಲ್ಲದಿದ್ದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅರಣ್ಯ ಹಕ್ಕು ಕಾಯ್ದೆ ವಿಚಾರದಲ್ಲಿ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಉಂಟಾಗುತ್ತಿರುವುದಕ್ಕೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ತಿರಸ್ಕರಿಸಿರುವ ಅರ್ಜಿಗಳ ಮರು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.

ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯತನ ತೋರುವ ಡಿಸಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ. ಸೇವಾ ಪುಸ್ತಕದಲ್ಲಿ ನಮೂದು ಮಾಡಬೇಕಾಗುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಲು ಸರಕಾರ ಕಾಯ್ದೆ ಜಾರಿಗೆ ತಂದಿದೆ. ತಾಂತ್ರಿಕವಾಗಿ ಅಡಚಣೆ ಇದೆ ಎಂದು ಹೇಳಿ ಜಾರಿಕೊಳ್ಳಬೇಡಿ. ಬಡವರಿಗೆ ಸಹಾಯ ಮಾಡಲು ಹೃದಯವಂತಿಕೆ ಬೇಕು. ಏನೇ ಅಡಚಣೆ ಇದ್ದರೂ ಕಂದಾಯ, ಅರಣ್ಯ, ಕಾನೂನು ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಸ್ಟಷ್ಟೀಕರಣ ತೆಗೆದುಕೊಂಡು ಹಕ್ಕುಪತ್ರ ವಿತರಿಸಿ ಎಂದು ಸಿಎಂ ಹೇಳಿದರು.

 ಕಾಯ್ದೆ ಜಾರಿಗೆ ತಂದಿರುವ ಉದ್ದೇಶವನ್ನು ಡಿಸಿಗಳು ಅರ್ಥ ಮಾಡಿಕೊಳ್ಳಬೇಕು. ಮಾನವೀಯತೆಯಿಂದ ಬಡವರಿಗೆ ಸಹಾಯ ಮಾಡಿ. ಅರ್ಜಿಗಳ ವಿಲೇವಾರಿಗೆ ಕಾಲಮಿತಿ ನಿಗದಿ ಮಾಡುತ್ತೇವೆ. ನಿಗದಿ ಮಾಡುವ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಿ. ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಪರಿಸ್ಥಿತಿ ಆ ಹಂತದವರೆಗೆ ಹೋಗಲು ಅವಕಾಶ ಮಾಡಿಕೊಡಬೇಡಿ. ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡುವುದನ್ನು ಬಿಟ್ಟು ಬಡವರಿಗೆ ಸಹಾಯ ಮಾಡಿ. ಮೂರು ತಿಂಗಳಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕುಪತ್ರ ಕೊಡಿ ಎಂದು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News