×
Ad

ಹೃದಯಕ್ಕೆ ಹೃದಯವಂತಿಕೆಯನ್ನು ತುಂಬುವ ತಿಂಗಳು ರಮಝಾನ್

Update: 2016-06-28 18:08 IST

 ಪವಿತ್ರ ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು, ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕೆಡುಕುಗಳಿಂದ ದೂರ ಉಳಿಯುವಂತಹ ಪ್ರಕ್ರಿಯೆಯಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಹೃದಯಕ್ಕೆ ಹೃದಯವಂತಿಕೆಯನ್ನು ತುಂಬುವ ಪವಿತ್ರ ಕಾರ್ಯ ರಮಝಾನ್ ಉಪವಾಸ. ಉಪವಾಸವೆಂಬುದು ಕೇವಲ ಹೊಟ್ಟೆಯನ್ನು ಖಾಲಿಯಾಗಿರಿಸುವುದಲ್ಲ. ಬದಲಾಗಿ ಕಣ್ಣುಗಳಿಂದ ಕೆಟ್ಟದ್ದನ್ನು ನೋಡದಿರುವುದು. ಕಿವಿಗಳಲ್ಲಿ ಕೆಟ್ಟದನ್ನು ಕೇಳದಿರುವುದು ನಾಲಗೆಯಲ್ಲಿ ಕೆಟ್ಟ ಶಬ್ದಗಳನ್ನು ಪ್ರಯೋಗಿಸಬಾರದು ಎಂಬ ನೆಲೆಯಲ್ಲಿ ಹಿರಿಯರಿಂದ ಆಚರಿಸಿಕೊಂಡ ಬಂದ ಈ ರಮಝಾನ್ ಉಪವಾಸದಲ್ಲಿ ಸ್ಪಷ್ಟವಾದ ಸಂದೇಶವಿದೆ.

ಉಪವಾಸ ಆಚರಿಸುವ ಮೂಲಕ ಎಲ್ಲಾ ದೈಹಿಕ ಹಾಗೂ ಮಾನಸಿಕ ಕೆಡುಕುಗಳಿಂದ ದೂರವುಳಿದು ಸಮಾಜಕ್ಕೆ ಮನುಷ್ಯನಾಗಿ ಉದಾತ್ತ ಸಂದೇಶವನ್ನು ಸಾರುವಂತಹ ತಿಂಗಳು ರಮಝಾನ್. ಈ ಒಂದು ತಿಂಗಳ ಉಪವಾಸದ ಕೊನೆಗೆ ಶಾಂತಿ, ಸಹನೆ, ಸೌಹಾರ್ದತೆಯ ಪ್ರತೀಕವಾಗಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಗುತ್ತದೆ. ವರ್ಷಪೂರ್ತಿ ಒಳ್ಳೆಯತನವನ್ನು ಮೈಗೂಡಿಸಿಕೊಳ್ಳಲು ಒಂದು ತಿಂಗಳ ಕಾಲ ದೇಹವನ್ನು, ಮನಸ್ಸನ್ನು ಏಕಾಗ್ರತೆಗೊಳಿಸುವುದು ಹಾಗೂ ಸಂಪೂರ್ಣ ಒಳಿತನ್ನೇ ಮಾಡುವ ಉದಾತ್ತವಾದ ಸಂದೇಶವನ್ನು ಸಾರುವಂತಹ ಈ ಪವಿತ್ರ ರಮಝಾನ್ ಆಚರಣೆ ಮಹತ್ವವಾದುದು.

ಸಮಾಜದಲ್ಲಿ ಪ್ರತಿನಿತ್ಯ ನಮ್ಮ ಹೃದಯ ಹಾಗೂ ಮನಸ್ಸಿನ ಜೊತೆಗೆ ದೈಹಿಕವಾಗಿಯೂ ಹಲವಾರು ರೀತಿಯ ಕೆಡುಕಗಳ ದಾಳಿಗೆ ಒಳಗಾಗುತ್ತಿರುತ್ತೇವೆ. ಆಕರ್ಷಣೆಗೊಳಪಡುತ್ತೇವೆ. ಅವುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೆಡುಕಿನಿಂದ ದೂರ ಉಳಿಯುವಂತೆ ನಮ್ಮನ್ನು ಪ್ರೇರೇಪಿಸುವಲ್ಲಿ ಈ ಉಪವಾಸ ಆಚರಣೆ ಜೀವನಪೂರ್ತಿ ನಮ್ಮಲ್ಲಿ ಆತ್ಮಸ್ಥೈರ್ಯವನ್ನು ತುಂಬುವಲ್ಲಿಯೂ ಸಹಕಾರಿ. ಎಲ್ಲಾ ಧರ್ಮ, ಜಾತಿ, ಮತಗಳೂ ತಮ್ಮದೇ ಆದ ಮಹತ್ವವನ್ನು ಹೊಂದಿದ್ದು, ಅವುಗಳು ನಮಗೆ ಹಿರಿಯರಿಂದ ಬಂದಿರುವ ಬಳುವಳಿ. ಅವುಗಳ ಮಹತ್ವವನ್ನು ಅರಿಯುವ ಜೊತೆಗೆ ಇತರಿಗೂ ಅದರ ಬಗ್ಗೆ ತಿಳಿ ಹೇಳುವ ಕಾರ್ಯ ಆಗಬೇಕು.

ನಮ್ಮ ವಿದ್ಯಾ ಸಂಸ್ಥೆಯಲ್ಲಿ 1,500ರಷ್ಟು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿದ್ದಾರೆ. ಅವರು ಲೌಕಿಕ ಶಿಕ್ಷಣಕ್ಕಾಗಿ ಬಂದಿದ್ದರೂ, ಅವರು ತಮ್ಮ ಧಾರ್ಮಿಕ ಶಿಕ್ಷಣದಿಂದ ದೂರವಾಗಬಾರದು, ವಂಚಿತರಾಗಬಾರದು ಎಂಬ ನೆಲೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಅವರ ಪ್ರಾರ್ಥನೆಗೆ ಬೇಕಾದ ವ್ಯವಸ್ಥೆಯಿದೆ. ಉಪವಾಸ ಸಂದರ್ಭದಲ್ಲೂ ಇಫ್ತಾರ್ ಹಾಗೂ ಪ್ರಾರ್ಥನೆಗೆ ಅವಕಾಶವಿದೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವ ಕ್ರೈಸ್ತ ಹಿಂದೂ, ಜೈನ ಸೇರಿದಂತೆ ಎಲ್ಲಾ ಧರ್ಮದವರೂ ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಅನುವು ನೀಡಿದಾಗ ಸೌಹಾರ್ದತೆ ಬೆಳೆಯುತ್ತದೆ. ಇದು ನಮ್ಮ ಆಶಯ. ಇದನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಪಾದಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ತಮ್ಮ ಧಾರ್ಮಿಕ ನೆಲೆಗಟ್ಟಿನ ಬಗ್ಗೆ ಅರಿವು ಅಗತ್ಯವಾಗಿರುತ್ತದೆ. ಆದರೆ ನಮ್ಮದು ಲೌಕಿಕ ಶಿಕ್ಷಣ ಸಂಸ್ಥೆ. ಇಲ್ಲಿ, ಆಯಾಯ ಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಬೋಧನೆ ಅಸಾಧ್ಯವಾಗಿದ್ದರೂ, ಪರೋಕ್ಷವಾಗಿ ಅವರವರ ಧರ್ಮಗಳ ಆಚರಣೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಅವರವರ ಧರ್ಮದ ಮಹತ್ವವನ್ನು ಅರಿತು ಇತರರಿಗೂ ಅದರ ಮಹತ್ವವನ್ನು ಪರಿಚಯಿಸುವ ಕೆಲಸವನ್ನು ಮಾಡುವುದು ಉತ್ತಮ.

ನಮ್ಮ ತಾಯಿಯನ್ನು ನಾವು ಯಾವ ರೀತಿಯಲ್ಲಿ ಗೌರವಿಸುತ್ತೇವೆಯೋ, ಇನ್ನೊಂದು ಮತದ ತಾಯಿಯನ್ನೂ ಅದೇ ರೀತಿ ಗೌರವಿಸುವುದು ನಮ್ಮ ಕರ್ತವ್ಯ ಹಾಗೂ ಧರ್ಮ. ರಮಝಾನ್ ಉಪವಾಸ ಈ ಸೌಹಾರ್ದ ಜೀವನದ ಸಂದೇಶವನ್ನು ನೀಡುತ್ತದೆ.

ಡಾ. ಮೋಹನ್ ಆಳ್ವ,

ಅಧ್ಯಕ್ಷರು, ಆಳಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ.

Writer - ಡಾ. ಮೋಹನ್ ಆಳ್ವ,

contributor

Editor - ಡಾ. ಮೋಹನ್ ಆಳ್ವ,

contributor