ಹಾಸನ: ನಿವೇಶನ ರಹಿತರಿಗೆ ಖಾಲಿ ಜಾಗ ಹಂಚಿಕೆಗೆ ಆಗ್ರಹಿಸಿ ಧರಣಿ
ಹಾಸನ, ಜೂ.28: ಖಾಲಿ ಇರುವ ಜಾಗವನ್ನು ನಿವೇಶನ ರಹಿತರಿಗೆ ನೀಡುವಂತೆ ಆಗ್ರಹಿಸಿ ನಿವೇಶನರಹಿತರು ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿದರು. ಎಸ್.ಎಂ. ನಗರ ಬಡಾವಣೆಗೆ ಹೊಂದಿಕೊಂಡಂತಿರುವ ಸರ್ವೆ ನಂ. 103ರಲ್ಲಿ 15 ಎಕರೆ ಖಾಲಿ ಇರುವ ಜಾಗವನ್ನು ನಗರ ಆಶ್ರಯ ಯೋಜನೆಗೆ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಆಶ್ರಯ ಸಮಿತಿ ತೀರ್ಮಾನದಂತೆ ಸರ್ವೆ ನಂ. 103 ರಲ್ಲಿ ಸರಕಾರಿ ಜಾಗವಿದ್ದು, ನಗರ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ನಿವೇಶನ ನೀಡಲು ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ ಇದುವರೆಗೂ ಆಶ್ರಯ ಸಮಿತಿ ಸಭೆಯನ್ನು ಕರೆಯದೆ ತಟಸ್ಥ ನೀತಿ ಅನುಸರಿಸಲಾಗುತ್ತಿದೆ ಎಂದು ದೂರಿದರು. ನಿವೇಶನ ರಹಿತರು ವಾಸಕ್ಕೆ ಮನೆಯಿಲ್ಲದೆ ತೊಂದರೆ ಅನುವಿಸುತ್ತಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು.
ಸಂಬಂಧಪಟ್ಟ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕೆಲ ರಾಜಕೀಯದವರು ಮತ್ತು ಆರ್ಥಿಕ ಬಲಾಢ್ಯರು ಸೇರಿಕೊಂಡು ಎರಡಕ್ಕಿಂತ ಹೆಚ್ಚು ಮನೆಯನ್ನು ಪಡೆದುಕೊಂಡಿದ್ದಾರೆ. ಅಧಿಕಾರಿಗಳು ಪರಿಶೀಲಿಸಿ ಮನೆಯನ್ನು ಮತ್ತು ನಿವೇಶನವನ್ನು ವಾಪಸ್ ಪಡೆದು ನಿವೇಶನ ಇಲ್ಲದ ಬಡವರಿಗೆ ನೀಡುವಂತೆ ಆಗ್ರಹಿಸಿದರು. ಈಗಾಗಲೇ ಆಶ್ರಯ ಸಮಿತಿ ಸದಸ್ಯರ ಗಮನಕ್ಕೆ ತರಲಾಗಿದ್ದರೂ ಕಳೆದ 10 ತಿಂಗಳಿನಿಂದಲೂ ಯಾವ ಕ್ರಮ ಕೈಗೊಂಡಿರುವುದಿಲ್ಲ. ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕರೆಯದೆ ನಿರ್ಲಕ್ಷ ಧೋರಣೆ ಪ್ರದರ್ಶಿಸಲಾಗಿದೆ ಎಂದು ಆರೋಪಿಸಿದರು.
ಕೂಡಲೇ ಕ್ರಮಕೈಗೊಂಡು ನ್ಯಾಯ ದೊರಕಿಸಿಕೊಟ್ಟು ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವ ಮೂಲಕ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿ ಮನವಿ ನೀಡಿದರು. ನಂತರ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ತೆರಳಿ ಜಿಲ್ಲಾಡಳಿತಕ್ಕೂ ಮನವಿ ನೀಡಿದರು.
ಪ್ರತಿಭಟನೆಯಲ್ಲಿ ನಗರ ಮತ್ತು ಸುತ್ತಮುತ್ತಲ ನಿವೇಶನ ರಹಿತ ಫಲಾನುವಿಗಳು ಹಾಗೂ ಜಮೀನು ಕಳೆದುಕೊಂಡ ಸಾರ್ವಜನಿಕರಾದ ತಟೆಕೆರೆ ರಂಗಪ್ಪ, ರಂಗಸ್ವಾಮಿ, ಗಣೇಶ್, ಪರಮೇಶ್, ಚಂದ್ರು ಮತ್ತಿತರರು ಪಾಲ್ಗೊಂಡಿದ್ದರು.