×
Ad

ಸಾರಿಗೆ ಇಲಾಖೆಯ ಸಮಗ್ರ ಬದಲಾವಣೆ

Update: 2016-06-28 23:29 IST

ತರೀಕೆರೆ, ಜೂ. 28: ಸಾರಿಗೆ ಇಲಾಖೆಯಲ್ಲಿ ವಾಹನ ಚಾಲಕರು ಮತ್ತು ಮಾಲಕರಿಗೆ ಅನುಕೂಲವಾಗುವಂತೆ ಸಮಗ್ರ ಬದಲಾವಣೆ ತರಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಭರವಸೆ ನೀಡಿದರು.

ತರೀಕೆರೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಎಆರ್‌ಟಿ ಕಚೇರಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಡೂರು ಮತ್ತು ತರೀಕೆರೆ ವ್ಯಾಪ್ತಿಯಲ್ಲಿ 1.24 ಲಕ್ಷ ವಾಹನಗಳಿದ್ದು, ವಾಹನ ಮಾಲಕರಿಗೆ ಅನುಕೂಲವಾಗುಂತೆ ಎ.ಆರ್.ಟಿ.ಓ ಕಚೇರಿಯನ್ನು ಆಧುನಿಕ ತಂತ್ರಜ್ಞಾನದಿಂದ ಸಂಪೂರ್ಣ ಗಣಕೀಕೃತ ಮಾಡಲಾಗಿದೆ. ದೇಶದಲ್ಲಿ ವಾಹನ ಸಂಚಾರ ನಿಯಮವನ್ನು ಬದಲಾಯಿಸಿ ಸಾಧ್ಯವಾದಷ್ಟು ಭ್ರಷ್ಟಾಚಾರವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರಿಗೆ ವರದಿ ಸಲ್ಲಿಸಿ ದೇಶದದ್ಯಾಂತ ಸಾರಿಗೆ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಕರ್ನಾಟಕ ರಾಜ್ಯದಲ್ಲಿ ವಾಣಿಜ್ಯ ತೆರಿಗೆ, ಅಬಕಾರಿ ಇಲಾಖೆಗಳ ನಂತರ ಸರಕಾರಕ್ಕೆ ಹೆಚ್ಚಿನ ಆದಾಯ ತರುತ್ತಿರುವ ಇಲಾಖೆ ಇದಾಗಿದೆ. ಒಂದು ವರ್ಷಕ್ಕೆ 4 ಸಾವಿರ ಕೋಟಿ ರೂ. ಆದಾಯವನ್ನು ಸರಕಾರಕ್ಕೆ ಸಾರಿಗೆ ಇಲಾಖೆ ನೀಡುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಆರ್‌ಟಿಒ ಕಛೇರಿಯ ಸದ್ಯದ ಕಾರ್ಯ ವೈಖರಿಯನ್ನು ಬದಲಾಯಿಸಿ ವಾಹನ ಚಾಲನ ಪರವಾನಿಗೆ ಮತ್ತು ವಾಹನಗಳ ಅಧಿಕೃತ ದಾಖಲೆಗಳನ್ನು ಪಡೆಯಲು ಖಾಸಗಿಯವರಿಗೆ ವಹಿಸಿ ಕೊಡುವ ಚಿಂತನೆ ಸರಕಾರದ ಮುಂದೆ ಇದೆ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಎಚ್.ಶ್ರೀನಿವಾಸ್ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ತರೀಕೆರೆ ಭಾಗಕ್ಕೆ ವಿಶೇಷ ಗಮನ ಹರಿಸಿ ಎ.ಆರ್.ಟಿ.ಒ ಕಚೇರಿ ಮಂಜೂರು ಮಾಡಿದ್ದಾರೆ. ಇದರಿಂದಾಗಿ ಕಡೂರು ಮತ್ತು ತರೀಕೆರೆ ವ್ಯಾಪ್ತಿಯ ವಾಹನ ಮಾಲಕರು ಮತ್ತು ಚಾಲಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಸಂದಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ, ತಾಲೂಕು ಪಂಚಾಯತ್ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಬಿ.ಸಿ. ಗೀತಾ, ತರೀಕೆರೆ ಪುರಸಭಾ ಅಧ್ಯಕ್ಷ ಟಿ.ಟಿ. ನಾಗರಾಜ್, ಕಡೂರು ಪುರಸಭೆ ಅಧ್ಯಕ್ಷೆ ಅನಿತಾ ರಾಜ್ ಕುಮಾರ್, ಬೀರೂರು ಪುರಸಭಾ ಅಧ್ಯಕ್ಷೆ ಮಮತಾ ಹರೀಶ್, ಸಾರಿಗೆ ಇಲಾಖೆ ಜಂಟಿ ನಿರ್ದೇಶಕ ಎಚ್.ರಘುನಾಥ್, ಅಪರ ಸಾರಿಗೆ ಆಯುಕ್ತ ಹೇಮಂತ ಕುಮಾರ್ , ಉಪ ಸಾರಿಗೆ ಆಯುಕ್ತ ಶಿವರಾಜ್ ಬಿ. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News