ಪುತ್ರನ ಶವವಿಟ್ಟು ಆ್ಯಂಬುಲೆನ್ಸ್‌ನಲ್ಲೇ ರಾತ್ರಿ ಕಳೆದ ತಾಯಿ
ಮಡಿಕೇರಿ, ಜೂ.28 : ಕಲ್ಲು ಹೃದಯದ ಪತಿ ಹಾಗೂ ಮಾನವೀಯತೆ ಮರೆತ ಮನೆ ಮಾಲಕನಿಂದಾಗಿ ಪುತ್ರನ ಶವವನ್ನು ರಾತ್ರಿ ಪೂರ್ತಿ ಆ್ಯಂಬುಲೆನ್ಸ್‌ನಲ್ಲಿಟ್ಟು ತಾಯಿಯೊಬ್ಬಳು ಕಣ್ಣೀರಿಟ್ಟ ಹೃದಯ ವಿದ್ರಾವಕ ಪ್ರಕರಣ ನಗರದಲ್ಲಿ ನಡೆದಿದೆ.
ಲೋಹಿತ್(22) ಎಂಬಾತ ತಾನು ಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ ಬಸ್‌ನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ನಿರ್ವಾಹಕನ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾಯಿ ಹಾಗೂ ಸಹೋದರಿ ಸಾರ್ವಜನಿಕರ ಮೊರೆ ಹೋಗಬೇಕಾದ ವಿಲಕ್ಷಣ ಪ್ರಸಂಗ ನಡೆಯಿತು. ಖಾಸಗಿ ಬಸ್‌ನಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ಲೋಹಿತ್‌ಎಂಬಾತ ಸೋಮವಾರ ತಾಳತ್‌ಮನೆಯಲ್ಲಿ ಬಸ್‌ನಿಂದ ಬಿದ್ದು ಮೃತಪಟ್ಟಿದ್ದ. ಈತನ ಮೃತದೇಹದ ಮರಣೋತ್ತರ ಪರೀಕ್ಷೆ ರಾತ್ರಿ 11 ಗಂಟೆ ವೇಳೆಗೆ ಪೂರ್ಣಗೊಂಡು ಅಂಚೆ ಕಚೇರಿ ಬಳಿ ಇರುವ ಬಾಡಿಗೆ ಮನೆಗೆ ಮೃತ ದೇಹವ್ನು ತರಲಾಯಿತು. ಆದರೆ ಮನೆಯ ಮಾಲಕ ಮೃತದೇಹದ ಪ್ರವೇಶಕ್ಕೆ ನಿರಾಕರಿಸಿದರು. ದಾರಿ ಕಾಣದಾದ ಲೋಹಿತನ ತಾಯಿ ಸುನಿತಾ ಹೆಬ್ಬಾಲೆ ಮನೆಯಲ್ಲಿದ್ದ ಪತಿಗೆ ವಿಷಯ ತಿಳಿಸಿದಾಗ ಹಣವಿದ್ದರೆ ಮಾತ್ರ ಮೃತದೇಹವನ್ನು ತಂದು ಅಂತ್ಯ ಸಂಸ್ಕಾರ ಮಾಡುವಂತೆ ಕಟ್ಟುನಿಟ್ಟಾಗಿ ಹೇಳಿದ್ದ ಎನ್ನಲಾಗಿದ್ದು, ಪರಿಣಾಮ ತಾಯಿ ಹಾಗೂ ಸಹೋದರಿ ಅಸಹಾಯಕರಾದರು.
ಅಂತ್ಯಸಂಸ್ಕಾರಕ್ಕೆ ಹಣವಿಲ್ಲದ ತಾಯಿ ಮತ್ತು ಸಹೋದರಿ ರಾತ್ರಿ ಪೂರ್ತಿ ಮೃತದೇಹವನ್ನು ಆ್ಯಂಬುಲೆನ್ಸ್‌ನಲ್ಲಿಟ್ಟುಕೊಂಡು ಕಣ್ಣೀರಿಡುತ್ತಾ ಕುಳಿತುಕೊಳ್ಳಬೇಕಾದ ದುಸ್ಥಿತಿ ಎದುರಾಯಿತು. ೆಳಗ್ಗೆ ಕೆಲವು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮನೆ ಮಾಲಕನ ಮನ ವೊಲಿಸಿ ಸ್ವಲ್ಪಸಮಯದವರೆಗೆ ಮೃತ ದೇಹವನ್ನು ಮನೆಯಲ್ಲಿಡಲು ವ್ಯವಸ್ಥೆ ಮಾಡಿದರು. ನಂತರ ಬಸ್ ಮಾಲಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಲೋಹಿತನ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಯಿತು.
ನಾಲ್ಕು ವರ್ಷಗಳ ಹಿಂದೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಹೆಬ್ಬಾಲೆಯಲ್ಲಿ ನೆಲೆಸಿದ್ದ ಕಲ್ಲು ಹೃದಯದ ಪತಿ ಹಾಗೂ ಮಾನವೀಯತೆ ಮರೆತ ಮನೆ ಮಾಲಕನ ವರ್ತನೆಯಿಂದ ಮೃತ ಲೋಹಿತನ ತಾಯಿ ಹಾಗೂ ಸಹೋದರಿ ಅಸಹಾಯಕತೆಯಿಂದ ರೋದಿಸುತ್ತಿದ್ದ ದೃಶ್ಯ ಹೃದಯ ಕಲಕುವಂತ್ತಿತ್ತು.