ಭಾರತ್ ಮಾತಾಕೀ ಜೈಎನ್ನದಿದ್ದರೆ ದೇಶದ್ರೋಹಿ ಪಟ್ಟ: ಅಮೀನ್‌ಮಟ್ಟು ವಿಷಾದ
ಬೆಂಗಳೂರು, ಜೂ.28: ದೇಶ ಪ್ರೇಮವೆಂಬುದು ನಿನ್ನೆ ಸುರಿದ ಮಳೆಗೆ ಇಂದು ಒಡೆದ ಮೊಳಕೆಯಲ್ಲ ಎಂಬ ಸತ್ಯವನ್ನು ಯುವಜನತೆ ಅರಿಯಬೇಕಾಗಿದೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ಹೇಳಿದ್ದಾರೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಸಮೃದ್ಧಿ ಪ್ರಕಾಶನ ಆಯೋಜಿಸಿದ್ದ ಲೇಖಕ ರಾ.ರಾಮಕೃಷ್ಣಯ್ಯ ಮುದ್ದೆಗ್ರಾಮ ರಚಿಸಿರುವ ‘98ನೆ ವಯಸ್ಸಿನಲ್ಲೂ ಕ್ರಿಯಾಶೀಲ ಎಚ್.ಎಸ್.ದೊರೆಸ್ವಾಮಿ’ ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶ ಪ್ರೇಮ ಎಂಬುದಕ್ಕೆ ಯಾವ ತ್ಯಾಗ, ಬಲಿದಾನ ಮಾಡಬೇಕಿಲ್ಲ, ಸ್ವಾತಂತ್ರ ಹೋರಾಟ ಮಾಡಬೇಕಿಲ್ಲ. ಬೀದಿಯಲ್ಲಿ ನಿಂತು ಭಾರತ್ ಮಾತಾಕೀ ಜೈ ಎಂದು ಕೂಗಿದರಷ್ಟೇ ಸಾಕು ದೊಡ್ಡ ದೇಶ ಭಕ್ತರಾಗಬಹುದು, ಇಲ್ಲದಿದ್ದರೆ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬಹುದು ಎಂದು ಬೇಸರದಿಂದ ನುಡಿದರು.
ಸಂಘ ಪರಿವಾರದ ನಾಯಕರ ಭಾವಚಿತ್ರಗಳು ಇರುವ ಫ್ಲೆಕ್ಸ್ ಹಾಕಿ, ಅವರ ಪರ ಪ್ರಚಾರ ಮಾಡಿದರಷ್ಟೇ ಸಾಕು ದೊಡ್ಡ ರಾಜಕಾರಣಿಯಾಗಬಹುದು. ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುವ ಪ್ರಮೇಯವೇ ಬೇಕಿಲ್ಲ, ಬದಲಾಗಿ ದೇವಾಲಯಕ್ಕೆ ದೊಡ್ಡಮಟ್ಟದ ಕಾಣಿಕೆ ನೀಡಿದರೆ ಸಾಕು ಸುಲಭವಾಗಿ ಧರ್ಮಾತ್ಮರಾಗಬಹುದು ಎಂದು ಭ್ರಷ್ಟ ವ್ಯವಸ್ಥೆಯ ಚಿತ್ರಣವನ್ನು ಬಿಚ್ಚಿಟ್ಟರು.
ದೇಶ ಭಕ್ತಿ, ದೇಶ ಪ್ರೇಮದ ದೊಡ್ಡ ಚರ್ಚೆ ರಾಷ್ಟ್ರದಲ್ಲಿ ನಡೆಯುತ್ತಿದೆ. ಈ ನಡುವೆಯೇ ಇಂದಿನ ಯುವ ಪೀಳಿಗೆಗೆ ಮಾದರಿ ವ್ಯಕ್ತಿಗಳೇ ಇಲ್ಲವಾಗಿದ್ದಾರೆ. ದೇಶ ಆರ್ಥಿಕವಾಗಿ ಮಾತ್ರವಲ್ಲ ನೈತಿಕವಾಗಿ ಭ್ರಷ್ಟವಾಗಿದೆ. ಈ ವ್ಯವಸ್ಥೆಯಲ್ಲಿ ಪ್ರಾಮಾಣಿವಾಗಿ ಉಳಿಯುವುದೇ ಬಹಳ ಕಷ್ಟದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ ಅವರು, ಎಚ್.ಎಸ್.ದೊರೆಸ್ವಾಮಿಯಂತಹ ಪ್ರಾಮಾಣಿಕರನ್ನು ಇಂದು ಯುವಕರು ಅನುಸರಿಸಬೇಕಿದೆ ಎಂದರು.ಾತೀಯತೆ, ಕೋಮುವಾದ, ಮೂಢನಂಬಿಕೆ, ಕಂದಾಚಾರ, ಅಸಹಿಷ್ಣತೆ ವಿರುದ್ಧ ಹೋರಾಟ ಮಾಡಲು ಹಿಂದೆ ಬುದ್ಧ, ಬಸವಣ್ಣ, ಪೆರಿಯಾರ್, ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್‌ರಂತಹ ದೊಡ್ಡ ಸೈನ್ಯವೇ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯಾದ ಕಾವಲುಗಾರರ ಕ್ಷೀಣತೆಯಿಂದ ಸಾಮಾಜಿಕ ಕಳ್ಳರ ಸಂಖ್ಯೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ದೇಶದಲ್ಲಿ ಬಡವರಿಗೆ ಬದುಕಲು ಸಾಧನಗಳನ್ನು ನೀಡಬೇಕೇ ಹೊರತು ಸೋಂಬೇರಿ ಮಾಡುವ ಯೋಜನೆಗಳನ್ನು ರೂಪಿಸಬಾರದು. ಕೃಷಿ ಉದ್ದೇಶದಿಂದ ಐದು ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿರುವ ರೈತರಿಂದ ಯಾವುದೇ ಕಾರಣಕ್ಕೂ ಜಮೀನು ತೆರವುಗೊಳಿಸಬಾರದು. ಒಂದು ವೇಳೆ ತೆರವುಗೊಳಿಸಲು ಮುಂದಾದರೆ ರಾಜ್ಯಾದ್ಯಂತ ರೈತರನ್ನು ಸಂಘಟಿಸಿ ಸೆ.1ರಿಂದ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ರಸು ಜನ್ಮ ಶತಮಾನೋತ್ಸವ ಸಾರ್ಥಕಗೊಳಿಸಿ: ವ್ಯವಸಾಯ ಮಾಡುವವರಿಗೆ ಜಮೀನು ನೀಡಬೇಕು. ಸೈಟು, ಮನೆ ಕಟ್ಟುವವರಿಗಲ್ಲ. ಅದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸೂಕ್ತ ಕಾಯ್ದೆಯನ್ನು ರೂಪಿಸಬೇಕು. ಆಹಾರ ಧಾನ್ಯಗಳನ್ನು ವಿದೇಶಗಳಿಂದ ರಫ್ತು ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಹಾಗೂ ಒಂದು ರೀತಿಯಾದ ಅಪರಾಧ. ವ್ಯವಸಾಯ ಮಾಡುವವರಿಗೆ ಅವಕಾಶ ಮಾಡಿಕೊಡಿ, ಇಲ್ಲಿನವರಿಗೆ ಅಗತ್ಯವಾದಷ್ಟು ದವಸ ಧಾನ್ಯ ಬೆಳೆಯಲು ಪ್ರೋತ್ಸಾಹಿಸಿ. ಹೀಗೆ ಮಾಡಿದರೆ ಅರಸು ಜನ್ಮ ಶತಮಾನೋತ್ಸವ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಓಟಿಗಾಗಿ ಮಾತ್ರ ಈ ಶತಮಾನೋತ್ಸವ ಆಚರಣೆ ಮಾಡಿದಂತಾಗುತ್ತದೆ ಎಂದು ಎಚ್.ಎಸ್.ದೊರೆಸ್ವಾಮಿ ಹೇಳಿದರು.ಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ, ನ್ಯಾಷನಲ್ ಬುಕ್ ಟ್ರಸ್ಟ್‌ನ ಮಾಜಿ ಅದ್ಯಕ್ಷ ಡಾ.ಸುಮತೀಂದ್ರ ನಾಡಿಗ, ಎಂ.ತಿಬ್ಬೇಗೌಡ, ಎನ್.ವೆಂಕಟಸ್ವಾಮಿರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
‘ನಾವು ಗಾಂಧಿಯುಗದಲ್ಲಿಲ್ಲ ಬದಲಾಗಿ ಗೋಡ್ಸೆ ಯುಗದಲ್ಲಿದ್ದೇವೆ. ಗಾಂಧಿ ತತ್ವ, ವಿಚಾರಧಾರೆಗಳು ಕಣ್ಮರೆಯಾ ಗುತ್ತಿದ್ದು, ಗೋಡ್ಸೆಗೆ ಮಂದಿರ ಕಟ್ಟಲು ಹೊರಟಿದ್ದೇವೆ. ಇದೇ ನಮ್ಮ ಸಹಿಷ್ಣುತೆ’
-ದಿನೇಶ್ ಅಮೀನ್‌ಮಟ್ಟು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ