ಪಂಚಾಯತ್ ರಾಜ್ ಬಲವರ್ಧನೆಗೆ ಕೇಂದ್ರ ಅನುದಾನ ನೀಡಬೇಕು: ಎಚ್.ಕೆ.ಪಾಟೀಲ್
ಬೆಂಗಳೂರು, ಜೂ.28: ರಾಷ್ಟ್ರದ ಪ್ರಜಾಸತ್ತೆಗೆ ಮೂಲಭೂತ ಅಡಿಪಾಯ ಒದಗಿಸುವ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲಗೊಳಿಸಲು ಕೇಂದ್ರ ಸರಕಾರ ಹೆಚ್ಚುವರಿ ಹಣಕಾಸು ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.
ಮಂಗಳವಾರ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ‘ಪಂಚಾಯತ್ ರಾಜ್ ಸಚಿವರ ಸಮ್ಮೇಳನ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರಿಕರಣ ದಂತಹ ಕ್ರಾಂತಿಕಾರಿ ಕಾನೂನನ್ನು ಜಾರಿಗೆ ತಂದ ಕೀರ್ತಿ ಕರ್ನಾಟಕದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಪಂಚಾಯತ್‌ಗಳಿಗೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಅಧಿಕಾರಗಳನ್ನು ನೀಡುವ ನಿಟ್ಟಿನಲ್ಲಿ ಹೊಸ ಸ್ವರೂಪದ ಗ್ರಾಮ ಸ್ವರಾಜ್ ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ. ರಾಷ್ಟ್ರದಲ್ಲಿಯೇ ಮೊಟ್ಟಮೊದಲ ಬಾರಿಗೆ ಪಂಚಾಯತ್ ಆಡಳಿತದಲ್ಲಿ ಪಂಚಾಯತ್ ನೀತಿಯ ನಿರ್ದೇಶನಾ ತತ್ವಗಳು ಜಾರಿಗೆ ತಂದಿದ್ದು, ಪಂಚಾಯತ್ ಸದಸ್ಯರು ಮತ್ತು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ಪಟ್ಟಿ ಮಾಡಿದ ಮೊಟ್ಟಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ರ್ನಾಟಕ ರಾಜ್ಯವು 14ನೆ ಹಣಕಾಸು ಆಯೋಗದ ಅನುದಾನವನ್ನು ಜನಸಂಖ್ಯೆ ಮತ್ತು ಭೌಗೋಳಿಕ ಪ್ರದೇಶದ ಆಧಾರದ ಮೇಲೆ 90:10 ಅನುಪಾತದಲ್ಲಿ ಗ್ರಾಮ ಪಂಚಾಯತ್‌ಗಳಿಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯದ ವಿಷಯಗಳನ್ನು ಆದ್ಯತಾ ವಲಯವೆಂದು ಪರಿಗಣಿಸಲಾಗಿದೆ. ರಸ್ತೆಗಳು, ಒಳಚರಂಡಿ, ಬೀದಿ ದೀಪ ಮತ್ತು ಸ್ಮಶಾನಗಳ ಅಭಿವೃದ್ಧಿ ಮುಂತಾದವುಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ರಾಜ್ಯದಲ್ಲಿ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಗಳ ವಿಶ್ವವಿದ್ಯಾನಿಲಯವು ಇದೇ ಶೈಕ್ಷಣಿಕ ವರ್ಷದಿಂದ ಗದಗ ನಗರದಲ್ಲಿ ಪ್ರಾರಂಭವಾಗುತ್ತಿದೆ. ಗ್ರಾಮೀಣಾಭಿವೃದ್ಧಿ ವಿಷಯಗಳ ಅಧ್ಯಯನಕ್ಕೆ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ ಎಂದು ಸಚಿವರು ಹೆಮ್ಮೆ ಪಟ್ಟರು. ಹೊಸ ಸ್ವರೂಪದ ಶಾಸನದ ಮೂಲಕ ಗ್ರಾಮೀಣ ಜನರನ್ನು ಅಧಿಕಾರಯುಕ್ತರನ್ನಾಗಿ ಮಾಡುವುದು. ಮತ್ತು ಧ್ವನಿಯಿಲ್ಲದ ಸಣ್ಣ ಸಣ್ಣ ಜನವಸತಿಗಳ ಗ್ರಾಮೀಣರಿಗೂ ಜನವಸತಿ ಸಭೆಯ ಹೊಸ ಪ್ರಯೋಗ ಮಾಡುವ ಮೂಲಕ ಹೆಚ್ಚಿನ ಶಕ್ತಿ ತುಂಬಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.