ಹಾಸನ: ಕೃಷಿ ಅಭಿಯಾನ ಜಾಗೃತಿ ಕಾರ್ಯಕ್ರಮ
ಹಾಸನ, ಜೂನ್. 29: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಹಕಾರದೊಂದಿಗೆ ಸರ್ಕಾರ ಕೃಷಿಕರಿಗೆ ರೂಪಿಸಿರುವ ಯೋಜನೆಗಳ ಕುರಿತು ಅರಿವು ಮೂಡಿಸುವ ವಿಶೇಷ ಕೃಷಿ ಅಭಿಯಾನ ಕಾರ್ಯಕ್ರಮ ಇಂದು ನಡೆಯಿತು.
ಇಂದು ಹಾಸನ ನಗರ, ಚನ್ನಂಗಿಹಳ್ಳಿ, ಕಿತ್ತಾನೆ,. ಕಬ್ಬತ್ತಿ, ಗಂಡಸಿ, ಮತ್ತಾವರ, ಅಂಕಪುರ, ಡಿ.ಎಂ.ಕುರ್ಕೆ, ಮಾಡಾಳು ಗ್ರಾಮಗಳಲ್ಲಿ ಸಂಚರಿಸಿ ಕೃಷಿ ಕುರಿತು ರೈತರಿಗೆ ಜಾಗೃತಿ ಮೂಡಿಸಿತು.
ಕೃಷಿ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದಲ್ಲಿ ಸರಕಾರ ಕೃಷಿಗಾಗಿ ರೂಪಿಸಿರುವ ಹಲವು ಯೋಜನೆಗಳು, ಒದಗಿಸಿರುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ಅಳವಡಿಸಿ ಜಿಲ್ಲೆಯಾದ್ಯಂತ ಅರಿವು ಮೂಡಿಸಲಾಗುತ್ತಿದೆ. ಕಲಾತಂಡಗಳ ಮೂಲಕ ಬೀದಿ ನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿ ಕೃಷಿ ಭಾಗ್ಯ, ಯಂತ್ರಧಾರೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಹೋಬಳಿಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೃಷಿ ಅಭಿಯಾನ ವಾಹನ ತೆರಳುತ್ತಿದ್ದು ಜಾಗೃತಿ ಕಾರ್ಯಕ್ರಮದ ಜೊತೆಗೆ ಕರಪತ್ರಗಳ ವಿತರಣೆ ಮೂಲಕ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಆ ಮೂಲಕ ರೈತರಲ್ಲಿ ಹೆಚ್ಚಿನ ಆತ್ಮ ವಿಶ್ವಾಸ ತುಂಬುವುದು ಹಾಗೂ ವೈಜ್ಞಾನಿಕ ಬೆಳೆ ಪದ್ಧತಿಗಳ ಅಳವಡಿಕೆಗೆ ಪ್ರೇರೇಪಿಸುವ ಕೆಲಸವನ್ನು ಮಾಡಲಾಗುತ್ತಿದೆ.