ಇಲ್ಲಿ ಛತ್ರಿ ಹಿಡಿದೇ ಪ್ರಯಾಣಿಸಬೇಕು....ಬಸ್ಸಿನೊಳಗೆ!
ಆಲೂರು, ಜೂ.29: ತಾಲೂಕಿನ ಕದಾಳು ಗ್ರಾಮಕ್ಕೆ ಸಂಚರಿಸುತ್ತಿರುವ ಕೆಎಸ್ಸಾರ್ಟಿಸಿ ಬಸ್ಸೊಂದರಲ್ಲಿ ಪ್ರಯಾಣಿಕರು ಸಂಚರಿಸಬೇಕಾದರೆ ಕಡ್ಡಾಯವಾಗಿ ಛತ್ರಿ ಹಿಡಿದೇ ಪ್ರಯಾಣಿಸಬೇಕು. ಇಲ್ಲದಿದ್ದರೆ ಪ್ರಯಾಣಿಕರು ಮಳೆನೀರಿನಿಂದಾಗಿ ಒದ್ದೆಯಾಗೋದು ಖಚಿತ. ಆ ಮಟ್ಟಕ್ಕೆ ಈ ಬಸ್ ಸೋರುತ್ತಿದೆ.
ತಾಲೂಕಿನ ಗ್ರಾಮೀಣ ಭಾಗಗಳಿಗೆ ಸಂಚರಿಸುವ ಕೆಎಸ್ಸಾರ್ಟಿಸಿಯ ಬಹುತೇಕ ಬಸ್‌ಗಳು ತೀರಾ ದುಸ್ಥಿತಿಯಲ್ಲಿದ್ದು, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವುದು ಹಾಗು ಉತ್ತಮ ಕಂಡೀಶನ್ ಇಲ್ಲದ ಕಾರಣ ಅಪಘಾತಗಳಾಗುತ್ತಿರುವುದು ಸಹಜವಾಗಿದೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಯಾಣಿಕರು, ಕೆಎಸ್ಸಾಟಿಸಿ ಬಸ್ ಚಾರ್ಜ್‌ನ್ನು ಸರಿಯಾಗೇ ಪಡೆಯುತ್ತಿದೆ. ಆದರೆ ಕಳಪೆ ಗುಣಮಟ್ಟದ ವಾಹನಗಳನ್ನು ರಸ್ತೆಗಿಳಿಸುತ್ತಿದೆ. ಇವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಡಿಪೋದಲ್ಲಿ ಸುವ್ಯವಸ್ಥಿತ ವಾಹನಗಳಿದ್ದರೂ ಕೂಡ ಈ ರೀತಿಯ ಗುಜರಿ ವಾಹನಗಳನ್ನು ಸಂಚಾರಕ್ಕೆ ಬಿಡುವುದರಿಂದ ಇವರಿಗೆ ಏನು ಲಾಭವಿದೆಯೋ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬಸ್ ಒಂದು ಸಂಚರಿಸಲಾರದ ಮಟ್ಟಕ್ಕೆ ತಲುಪಿತೆಂದರೆ ಅದನ್ನು ಓಡಿಸಬಾರದೆಂಬ ಕನಿಷ್ಠ ಪ್ರಜ್ಞೆಯೂ ಇವರಿಗೆ ಇದ್ದಂತಿಲ್ಲ. ಅಂತಹ ವಾಹನಗಳನ್ನು ಓಡಿಸುತ್ತಾರೆಂದರೆ ಜನಸಾಮಾನ್ಯರ ಜೀವಗಳೊಂದಿಗೆ ಇವರು ಚೆಲ್ಲಾಟವಾಡುತ್ತಿದ್ದಾರೆಂಬುದು ಸ್ಪಷ್ಟವಾಗಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣ ಸೂಕ್ತ ಬಸ್‌ನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಇವರ ವಿರುದ್ಧ ಸಾರಿಗೆ ಸಚಿವರಿಗೆ ದೂರು ಸಲ್ಲಿಸಲಾಗುವುದು. ಅಲ್ಲದೆ, ಇಲಾಖೆಯ ವಿರುದ್ಧ ಬಸ್ ತಡೆ ಮಾಡಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆಯನ್ನೂ ನೀಡಿದ್ದಾರೆ.