×
Ad

ಪಡಿತರ ಚೀಟಿ ಪಡೆಯಲು ‘ಷರತ್ತು’ಗಳು ಇನ್ನೂ ಸರಳ: ಆಹಾರ ಸಚಿವ ಯು.ಟಿ.ಖಾದರ್

Update: 2016-06-29 20:59 IST

ಬೆಂಗಳೂರು, ಜೂ. 29: ಅರ್ಹರಿಗೆ ಪಡಿತರ ದೊರಕಿಸಿಕೊಡುವ ದೃಷ್ಟಿಯಿಂದ ಪಡಿತರ ಚೀಟಿ ಪಡೆಯಲು ಪ್ರಸ್ತುತ ಇರುವ 14 ಷರತ್ತುಗಳನ್ನು ರದ್ದುಪಡಿಸಿ, ಸರಳ ರೂಪದಲ್ಲಿ ಹೊಸನೀತಿಯನ್ನು ಮೂರು ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಆಹಾರ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿ ವಿತರಣೆಗೆ ಪ್ರಸ್ತುತ ಇರುವ 14 ಷರತ್ತುಗಳನ್ನು ರದ್ದುಪಡಿಸಿ ಸರಳ ರೀತಿಯಲ್ಲಿ ನಾಲ್ಕೈದು ಷರತ್ತುಗಳ ನೀತಿಯನ್ನು ರೂಪಿಸಲು ಉದ್ದೇಶಿಸಲಾಗಿದೆ ಎಂದರು.

ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಹೊಸ ನೀತಿ ರೂಪಿಸಿ, ಸಂಪುಟ ಒಪ್ಪಿಗೆ ಬಳಿಕ ಆ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದ ಅವರು, ಹೊಸದಾಗಿ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸುವವರು ವಿದ್ಯುತ್ ಬಿಲ್‌ನ ಆರ್‌ಆರ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಸೇರಿ ಮತ್ತಿತರ ದಾಖಲೆಗಳ ಬದಲಿಗೆ ‘ಆಧಾರ್’ ನೀಡಿದರೆ ಸಾಕು ಎಂದು ಸ್ಪಷ್ಟಪಡಿಸಿದರು.

ಪಡಿತರ ಚೀಟಿ ವಿತರಣೆ : ಹೊಸ ಪಡಿತರ ಚೀಟಿಗಾಗಿ 10ಲಕ್ಷ ಅರ್ಜಿಗಳು ಬಂದಿದ್ದು, ಇನ್ನು 3ತಿಂಗಳ ಒಳಗೆ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಖುದ್ದು ಪರಿಶೀಲಿಸಿ ಅರ್ಹತೆ ಆಧಾರದಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುಗಳನ್ನು ವಿತರಣೆ ಮಾಡಲಾಗುವುದು ಎಂದರು.

 ಪಡಿತರ ಚೀಟಿಗೆ ‘ಆಧಾರ್’ ಸಂಖ್ಯೆ ಜೋಡಣೆಗೆ ಜೂ.30 ಕೊನೆಯ ದಿನ. ಈಗಾಗಲೇ ಶೇ.85ರಷ್ಟು ಮಂದಿ ‘ಆಧಾರ್’ ನೀಡಿದ್ದು, ಹೊಂದಾಣಿಕೆ ಮಾಡಲಾಗಿದೆ. ಉಳಿದ ಶೇ.5ರಷ್ಟು ಮಂದಿ ಹೊಂದಾಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಶೇ.10ರಷ್ಟು ಮಂದಿ ‘ಆಧಾರ್’ ನೀಡಿಲ್ಲ. ಆದರೂ, ಅವರಿಗೆ ಪಡಿತರ ನಿಲ್ಲಿಸುವುದಿಲ್ಲ ಎಂದರು.

ಕೂಪನ್ ವ್ಯವಸ್ಥೆ: ಸೀಮೆಎಣ್ಣೆಗೆ ಪ್ರಾಯೋಗಿಕವಾಗಿ ‘ಕೂಪನ್ ವ್ಯವಸ್ಥೆ’ ಜಾರಿಗೆ ತಂದಿದ್ದು, ಶೇ.50ರಷ್ಟು ಮಂದಿ ಕೂಪನ್ ಪಡೆದಿಲ್ಲ. ಹೀಗಾಗಿ ಇಲಾಖೆಗೆ ಉಳಿತಾಯ ಆಗಿದೆ. ಬೆಂ.ನಗರ, ಹತ್ತು ಜಿಲ್ಲೆಗಳ 1700 ನ್ಯಾಯಬೆಲೆ ಅಂಗಡಿಗಳ 4.60ಲಕ್ಷ ಕಾರ್ಡುಗಳ ಪೈಕಿ, 2.50 ಲಕ್ಷ ಮಂದಿ ಕೂಪನ್ ಪಡೆದಿದ್ದು, ಆಪೈಕಿ 1.36 ಲಕ್ಷ ಮಂದಿ ಸೀಮೆಎಣ್ಣೆ ಪಡೆದಿದ್ದಾರೆ. ಮುಂಬರುವ ದಿನಗಳಲ್ಲಿ ಪಡಿತರ ವಿತರಣೆಗೂ ಕೂಪನ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.

ರಾಜ್ಯದಲ್ಲಿ 8.24 ಲಕ್ಷ ಅಂತೋದಯ, 1.35 ಕೋಟಿ ಬಿಪಿಎಲ್, 27.15ಲಕ್ಷ ಎಪಿಎಲ್ ಕಾರ್ಡುಗಳಿದ್ದು, ಅರ್ಹ ಫಲಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಎಲ್ಲರಿಗೂ ಪಡಿತರ ಚೀಟಿ ದೊರಕಿಸಿಕೊಡುವುದು ನಮ್ಮ ಮುಖ್ಯ ಉದ್ದೇಶ ಎಂದರು.

ರೋಗಿಗಳಿಗೂ ಕಾರ್ಡ್: ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಿಪಿಎಲ್ ಕಾರ್ಡ್ ನೀಡಲು ಉದ್ದೇಶಿಸಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬೆಲೆ ನಿಯಂತ್ರಣ: ಬೆಳೆ ಕಾಳುಗಳು ಸೇರಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸಗಟು ಮಾರಾಟಗಾರರೊಂದಿಗೆ ಸಭೆ ನಡೆಸಲಾಗುವುದು ಎಂದ ಅವರು, ಬೆಂ.ನಗರ ಸೇರಿ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2 ಸಾವಿರ ಕ್ವಿಂಟಾಲ್, ಇತರೆ ನಗರಗಳಲ್ಲಿ 1 ಸಾವಿರ ಕ್ವಿಂಟಾಲ್‌ಗೂ ಅಧಿಕ ದಾಸ್ತಾನು ಮಾಡಿವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾನೂನು ಉಲ್ಲಂಘಿಸುವ ಅಕ್ರಮ ದಾಸ್ತಾನುದಾರರ ವಿರುದ್ಧ ದಾಳಿ ನಡೆಸಿ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗುವುದು. ಕ್ರಿಮಿನಲ್ ಮೊಕದ್ದಮೆ ಹಾಗೂ ಬಂಧನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News