×
Ad

‘ಸಾರ್ವಜನಿಕ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ’

Update: 2016-06-29 23:15 IST

ವೀರಾಜಪೇಟೆ, ಜೂ.29: ಜಾತ್ಯತೀತ ತತ್ವ ಸಿದ್ಧಾಂತಗಳ ಆಧಾರದ ಮೇಲಿರುವ ಜನತಾ ದಳ ಪಕ್ಷದ ಬಲಿಷ್ಠ ಸಂಘಟನೆಗೆ ಪಕ್ಷದ ಕಾರ್ಯಕರ್ತರು ನಿಷ್ಪಕ್ಷಪಾತದಿಂದ ಪ್ರಾಮಾಣಿಕವಾಗಿ ದುಡಿಯಬೇಕು. ಪಕ್ಷದ ಮೂಲಕ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು ಎಂದು ಜನತಾದಳದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ಪುರಭವನದಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಜನತಾದಳ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಕೇತ್ ಪೂವಯ್ಯ ಅವರು, ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದರೆ ಪಕ್ಷದ ಸಂಘಟನೆ ಬೆಳವಣಿಗೆ ಸಾಧ್ಯ. ಚುನಾವಣೆ ಬಂದಾಗ ಮಾತ್ರ ಪಕ್ಷದ ಪ್ರಚಾರದಲ್ಲಿ ತೊಡಗುವುದು, ನಂತರ ನಿಷ್ಕ್ರಿಯರಾಗುವುದು ಸರಿಯಲ್ಲ. ಚುನಾವಣೆಯಲ್ಲಿ ಗೆದ್ದರೂ ಸೋತರೂ ಪಕ್ಷಕ್ಕೆ ಸೇವೆ ಸಲ್ಲಿಸುವ ಮನೋಭಾವ ಹೊಂದಿರಬೇಕು. ಪಕ್ಷವನ್ನು ಎಲ್ಲ ರೀತಿಯಿಂದಲೂ ಸಂಘಟಿಸವುದು ಕಾರ್ಯಕರ್ತನ ಕರ್ತವ್ಯವಾಗಿದೆ ಎಂದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದಿಂದ ಅನೇಕ ಮತಗಟ್ಟೆ ಸಮಿತಿ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ಈ ಕಾರ್ಯ ಮುಂದುವರಿಯಲಿದೆ. ಕೊಡಗಿನಲ್ಲಿ ಜನತಾದಳ ಅಲ್ಪಾವಧಿಯಲ್ಲಿಯೇ ನಿರೀಕ್ಷಿತ ಸಂಘಟನೆಯೊಂದಿಗೆ ವಿಧಾನ ಪರಿಷತ್ ಹಾಗೂ ಜಿಪಂ ಹಾಗೂ ತಾಪಂ ಚುನಾವಣೆಯನ್ನು ಎದುರಿಸಿತು. 2018ರ ಚುನಾವಣೆಯ ಹೊತ್ತಿಗೆ ರಾಜ್ಯದ ಆಡಳಿತದಲ್ಲಿ ದಾಪುಗಾಲಿರಿಸಲಿದೆ ಎಂದರು.

       ಪಕ್ಷದ ಜಿಲ್ಲಾ ಸಮಿತಿ ಮುಖಂಡ ಹಾಗೂ ವೀರಾಜಪೇಟೆ ಪಪಂ ಹಿರಿಯ ಸದಸ್ಯ ಎಸ್.ಎಚ್.ಮತೀನ್,ಜನತಾದಳ ಪಕ್ಷದ ಪ್ರಮುಖ ಸಿ.ಎ.ನಾಸಿರ್, ಪಕ್ಷದ ಜಿಲ್ಲಾ ಸಮಿತಿಯ ಪ್ರ.ಕಾರ್ಯದರ್ಶಿ ಕೆ.ಆರ್. ಸುರೇಶ್ ಮಾತನಾಡಿದರು.

ವೇದಿಕೆಯಲ್ಲಿ ಪಕ್ಷದ ಮಹಿಳಾ ಘಟಕದ ಸಂಚಾಲಕಿ ಹಾಗೂ ಕಾನೂರು ಗ್ರಾಪಂನ ಗೀತಾ, ಕುಟ್ಟ ವಿಭಾಗದ ಮುಖಂಡ ಪಿ.ವಿ.ರೆನ್ನಿ, ಚೆನ್ನನಕೋಟೆ ವಿಭಾಗದ ರಾಜೇಶ್, ವೀರಾಜಪೇಟೆ ನಗರದ ಸಕ್ಲೇನ್, ಅಯಾಝ್, ಜಿಲ್ಲಾ ಸಮಿತಿಯ ಎಚ್.ಜಿ.ಗೋಪಾಲ್ ಉಪಸ್ಥಿತರಿದ್ದರು.

 ಕೆ.ಆರ್.ಸುರೇಶ್ ಸ್ವಾಗತಿಸಿ, ಅಶ್ರಫ್ ಅಲಿ ನಿರೂಪಿಸಿ ವಂದಿಸಿದರು.

ಸಭೆಯಲ್ಲಿ ವಿಧಾನಸಭಾ ಕ್ಷೇತ್ರದ ಕುಟ್ಟದ ನಾಥಂಗಲ್, ಪಾಲಿಬೆಟ್ಟ, ಚನ್ನನಕೋಟೆ, ಶ್ರೀಮಂಗಲ, ಕಾನೂರು, ಗೋಣಿಕೊಪ್ಪ, ಪೊನ್ನಂಪೇಟೆ ವಿವಿಧ ಸ್ಥಳಗಳಿಂದ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಸಮಾರಂಭದ ಬಳಿಕ ಪಕ್ಷದ ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ಪಕ್ಷದ ಸದಸ್ಯತ್ವ ನೋಂದಣಿ ಪ್ರಾರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News