ದೇವಟ್‌ಪರಂಬು ವಿವಾದ ಮರೆ ಮಾಚಲು ಸೋಮವಾರಪೇಟೆ ಗಲಭೆ ಸೃಷ್ಟಿ: ಪಿಎಫ್‌ಐ
ಮಡಿಕೇರಿ, ಜೂ.29: ದೆೇವಟ್ ಪರಂಬು ವಿವಾದದ ಮೂಲಕ ಗೌಡರು ಮತ್ತು ಕೊಡವರ ನಡುವೆ ಬಿರುಕು ಉಂಟು ಮಾಡಿದ ಬಿಜೆಪಿಯ ಕುತಂತ್ರ ಇದೀಗ ಬಯಲಾಗಿದ್ದು, ಇದನ್ನು ಮರೆಮಾಚಲು ಸೋಮವಾರಪೇಟೆಯಲ್ಲಿ ಹಿಂದೂ, ಮುಸ್ಲಿಮ್ ಎನ್ನುವ ಭೇದವನ್ನು ಮೂಡಿಸಿ ಗಲಭೆಗೆ ಪ್ರಚೋದನೆ ನೀಡುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಎಫ್‌ಐ ಜಿಲ್ಲಾಧ್ಯಕ್ಷ ಟಿ.ಎಚ್ ಅಬೂಬಕರ್, ದೇವಟ್ ಪರಂಬು ವಿವಾದದಿಂದ ತನ್ನ ವರ್ಚಸ್ಸನ್ನು ಕಳೆದುಕೊಂಡಿರುವ ಬಿಜೆಪಿ, ಸಂಘ ಪರಿವಾರ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು. ಸಂಘ ಪರಿವಾರದ ಕೆಲವು ಪ್ರಮುಖರು ಜಿಲ್ಲೆಗೆ ಆಗಮಿಸಿ ಕೋಮು ಪ್ರಚೋದನೆಯನ್ನು ನೀಡುತ್ತಿದ್ದಾರೆಂದು ಆರೋಪಿಸಿದ ಅವರು, ಕೋಮು ಪ್ರಚೋದಕರಿಗೆ ಜಿಲ್ಲೆಯನ್ನು ಪ್ರವೇಶಿಸಲು ಜಿಲ್ಲಾಡಳಿತ ಅವಕಾಶ ನೀಡಬಾರದೆಂದು ಒತ್ತಾಯಿಸಿದರು. ಮುಗ್ಧ ಹಿಂದೂಗಳನ್ನು ಉದ್ರೇಕಿಸುವ ಮೂಲಕ ಪಿಎಫ್‌ಐ ಸಂಘಟನೆ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣವನ್ನು ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಸಮಾಜ ಘಾತುಕ ಶಕ್ತಿಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿಗಾ ವಹಿಸಬೇಕೆಂದು ಒತ್ತಾಯಿಸಿದರು. ಸೋಮವಾರಪೇಟೆಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಅಲ್ಪಸಂಖ್ಯಾತರ ಅಂಗಡಿಗಳ ಮೇಲೆ ದಾಳಿ ಮಾಡಿ, ಹಲ್ಲೆ ನಡೆಸಿ ದರೋಡೆ ಮಾಡಿರುವವರನ್ನು ತಕ್ಷಣ ಬಂಧಿಸದಿದ್ದಲ್ಲಿ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಸೋಮವಾರಪೇಟೆ ಸಂಘ ಪರಿವಾರದ ಕಾರ್ಯಕರ್ತ ಮೋಹನ್ ಮೇಲೆ ವೈಯಕ್ತಿಕ ವಿಚಾರಕ್ಕಾಗಿ ಹಲ್ಲೆ ನಡೆದಿದೆ. ಆದರೆ ಬಿಜೆಪಿ ಮತ್ತು ಸಂಘ ಪರಿವಾರ ಇದಕ್ಕೆ ಕೋಮು ಬಣ್ಣ ಹಚ್ಚಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಸೋಮವಾರಪೇಟೆಯಲ್ಲಿ ನಡೆದ ಎಲ್ಲ ಘಟನೆಗಳಿಗೆ ಬಿಜೆಪಿಯ ಎಸ್.ಜಿ.ಮೇದಪ್ಪ ಹಾಗೂ ಅಭಿಮನ್ಯು ಕುಮಾರ್ ನೇರ ಹೊಣೆ ಎಂದು ಆರೋಪಿಸಿದರು.
ಐಗೂರಿನ ಮಸೀದಿ ಹಾಗೂ ವಾಹನಗಳಿಗೆ ಸಂಘಪರಿವಾರದ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರೂ ಮುಸ್ಲಿಮರು ಉದ್ರೇಕ ಗೊಳ್ಳಲಿಲ್ಲ. ಮರುದಿನ ರಾತ್ರಿ ಮುಸ್ಲಿಮನೆಂದು ಭಾವಿಸಿ ಕೋಮಾರಿ ಸತೀಶ್ ಎಂಬಾತನ ಮೇಲೆ ಸಂಘ ಪರಿವಾರ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಸತೀಶ್‌ನನ್ನು ಸಮಗ್ರ ತನಿಖೆಗೆ ಒಳಪಡಿಸಿದಾಗ ಮಾತ್ರ ಸಂಘ ಪರಿವಾರದ ಷಡ್ಯಂತ್ರ ಬಯಲಾಗಲಿದೆ ಎಂದು ಅಬೂಬಕರ್ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಪಿಎಫ್‌ಐ ಜಿಲ್ಲಾ ಪ್ರ.ಕಾರ್ಯದರ್ಶಿ ಟಿ.ಎ ಹಾರಿಸ್ ಉಪಸ್ಥಿತರಿದ್ದರು.