ಅರಣ್ಯ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ
ಸಾಗರ, ಜೂ.29: ಅರಣ್ಯ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಬದಲಾದ ದಿನಮಾನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶವಾಗುತ್ತಿದ್ದು, ಇದು ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ ಎಂದು ಜಿಪಂ ಸದಸ್ಯ ರಾಜಶೇಖರ ಗಾಳಿಪುರ ಹೇಳಿದ್ದಾರೆ.
ತಾಲೂಕಿನ ಕಾನ್ಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಇತ್ತೀಚೆಗೆ ಸಾಮಾಜಿಕ ಅರಣ್ಯ ಯೋಜನೆಯಡಿ ಸಾಲು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಬೇರೆ ಬೇರೆ ಉದ್ದೇಶಕ್ಕೆ ಕಾಡು ನಾಶ ಮಾಡಲಾಗುತ್ತಿದೆ. ಪ್ರಸ್ತುತ ಎದುರಿಸುತ್ತಿರುವ ವಿಪರೀತ ಬಿಸಿಲು, ಅತಿವೃಷ್ಟಿ, ಅನಾವೃಷ್ಟಿಯಂತಹ ಪರಿಸರ ವಿಕೋಪಕ್ಕೆ ಕಾರಣ ಅರಣ್ಯನಾಶವಾಗಿದೆ. ಇದರಿಂದ ನಾವು ಎಚ್ಚೆತ್ತುಕೊಳ್ಳಬೇಕು. ಮನೆ, ಶಾಲೆ, ದೇವಸ್ಥಾನ, ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವತ್ತ ಗ್ರಾಮಸ್ಥರು ಗಮನ ಹರಿಸಬೇಕು ಎಂದು ಹೇಳಿದರು. ಕಾನ್ಲೆ ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 750 ಗಿಡಗಳನ್ನು ನೆಡಲಾಗುತ್ತಿದೆ. ಅರಣ್ಯ ಇಲಾಖೆಯವರು ರಸ್ತೆ ಪಕ್ಕದಲ್ಲಿ ನೆಟ್ಟಿರುವ ಗಿಡಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಟ್ರೀಗಾರ್ಡ್‌ಗಳನ್ನು ಅಳವಡಿಸಬೇಕು. ಪ್ರಾಣಿಪಕ್ಷಿಗಳಿಗೆ ಆಹಾರವಾಗುವ ಹಾಗೂ ಜನರಿಗೆ ಬೇಸಿಗೆಯಲ್ಲಿ ನೆರಳನ್ನು ಕೊಡುವ ಗಿಡಗಳನ್ನು ನೆಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಅಶೋಕ ಮರಗಿ, ಅರಣ್ಯ ಇಲಾಖೆಯ ನೂತನ್, ಗ್ರಾಮಸ್ಥರಾದ ಉಲ್ಲಾಸ್, ಲಿಂಗರಾಜ ಗೌಡ ಸೈದೂರು, ಬಸವರಾಜ ಜನ್ನೆಹಕ್ಲು ಇನ್ನಿತರರು ಉಪಸ್ಥಿತರಿದ್ದರು.