×
Ad

ಸಾಗರ: ಬೆಳೆವಿಮಾ ಮಾಹಿತಿ ಕಾರ್ಯಾಗಾರ

Update: 2016-06-29 23:19 IST

ಸಾಗರ,ಜೂ.29: ಹವಾಮಾನಾಧಾರಿತ ಬೆಳೆವಿಮೆ ಯೋಜನೆ ಕಂತು ತುಂಬುವ ಅವಧಿ ಜೂ.30ಕ್ಕೆ ಕೊನೆಗೊಳ್ಳಲಿದೆ. ಗ್ರಾಮೀಣ ಭಾಗದ ಸೊಸೈಟಿಗಳು ನಿಗದಿತ ಅವಧಿಯೊಳಗೆ ರೈತರಿಂದ ಕಂತು ತುಂಬಿಸಿಕೊಂಡು ಅವರನ್ನು ವಿಮಾ ಸೌಲಭ್ಯದ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ತಾಪಂ ಸದಸ್ಯ ಮಲ್ಲಿಕಾರ್ಜುನ ಹಕ್ರೆ ಹೇಳಿದ್ದಾರೆ.

ಇಲ್ಲಿನ ತಾಪಂನ ಸಾಮರ್ಥ್ಯಸೌಧದಲ್ಲಿ ಬುಧವಾರ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಹಮ್ಮಿಕೊಳ್ಳಲಾಗಿದ್ದ 2016ನೆ ಸಾಲಿನ ಕೇಂದ್ರ ಮತ್ತು ರಾಜ್ಯ ಸರಕಾರದ ಬೆಳೆವಿಮಾ ಅನುಷ್ಠಾನ ಮಾಹಿತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ವಿಮಾ ಮೊತ್ತ ಪಾವತಿಗೆ ಅವಧಿ ತೀರ ಕಡಿಮೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭತ್ತ ಹಾಗೂ ಶುಂಠಿ ಬೆಳೆಗಾರರು ಹೆಕ್ಟೇರ್‌ಗೆ 5,800 ರೂ. ಪಾವತಿ ಮಾಡಿದರೆ ಮಳೆಯಿಂದ ಬೆಳೆಹಾನಿಯಾದರೆ ಹೆಕ್ಟೇರ್‌ಗೆ 1.18 ಲಕ್ಷ ರೂ.ವರೆಗೆ ವಿಮಾಮೊತ್ತ ಪಡೆಯಲು ಅವಕಾಶ ಇರುತ್ತದೆ. ಸೊಸೈಟಿ ಆಡಳಿತ ಮಂಡಳಿ ಯೋಜನೆಯನ್ನು ಬೆಳೆಗಾರರಿಗೆ ಮನಮುಟ್ಟುವಂತೆ ತಿಳಿಸಿ ಅವರು ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಬೇಕು ಎಂದರು. ತಾಲೂಕಿನ 31 ಗ್ರಾಪಂನಲ್ಲಿ ಮಳೆ ಮಾಪಕ ಅಳವಡಿಸಲಾಗಿದೆ. ಇದರಿಂದ ಮಳೆ ಬಿದ್ದ ಪ್ರಮಾಣ ಕಂಡು ಹಿಡಿಯ ಬಹುದು. 50ಮಿ.ಮೀ.ಗೂ ಹೆಚ್ಚು ಮಳೆ ಬಿದ್ದಲ್ಲಿ 48 ಗಂಟೆಯೊಳಗೆ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿದರೆ ವಿಮಾ ಮೊತ್ತ ಬೆಳೆಗಾರರ ಖಾತೆಗೆ ಜಮೆ ಆಗುತ್ತದೆ. ಇದರ ಜೊತೆಗೆ ಕೃಷಿ ಇಲಾಖೆಯಿಂದ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಜಾರಿಯಿದ್ದು, ಇದಕ್ಕೆ ಜು.15ರೊಳಗೆ ರೈತರು ಅರ್ಜಿ ಸಲ್ಲಿಸಬಹುದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರು ಹಾಗೂ ಬಿಪಿಎಲ್ ಕಾರ್ಡ್‌ದಾರರನ್ನು ಸಹಕಾರಿ ಸಂಸ್ಥೆಗಳ ಸದಸ್ಯರನ್ನಾಗಿ ಮಾಡಿಕೊಳ್ಳುವಂತೆ ಸರಕಾರದ ಸ್ಪಷ್ಟ ಸೂಚನೆಯಿದೆ. ಈ ಬಗ್ಗೆ ಆಡಳಿತ ಮಂಡಳಿ ಗಮನ ಹರಿಸಬೇಕು. ಸೊಸೈಟಿಗಳು ರೈತರಿಗೆ ಬೆಳೆಸಾಲವನ್ನು ನಿಗದಿತ ಅವಧಿಯಲ್ಲಿ ನೀಡುವಂತೆ ಆಗಬೇಕು ಎಂದರು. ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಪರಶುರಾಮ್, ಕಾರ್ಯನಿರ್ವಹಣಾಧಿಕಾರಿ ಸಿದ್ದಲಿಂಗಯ್ಯ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಅಶೋಕ್, ಹಿರಿಯ ತೋಟಗಾರಿಕಾ ನಿರ್ದೇಶಕ ಡಿ.ಕೆ.ತಿಮ್ಮಪ್ಪ, ಡಿಸಿಸಿ ಬ್ಯಾಂಕ್‌ನ ವಿಸ್ತರಣಾಧಿಕಾರಿ ಮಂಜಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News