ತರೀಕೆರೆ: ಚರಂಡಿ ಕಾಮಗಾರಿಗೆ ಶಾಸಕರಿಂದ ಚಾಲನೆ
ತರೀಕೆರೆ, ಜೂ. 29: ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ 1ಕೋಟಿ 11ಲಕ್ಷ ರೂ. ವೆಚ್ಚದ ಚರಂಡಿ ಕಾಮಗಾರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಗುದ್ದಲ್ಲಿ ಪೂಜೆ ನೇರವೇರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಅಮೃತಾಪುರ ನೇರಲಕೆರೆ ನಡುವೆ 1 ಕಿ.ಮೀ, ಸಪ್ಪಿನಹಳ್ಳಿ ಗ್ರಾಮದಲ್ಲಿ 1ಕಿ.ಮೀ, ಹುಣಸಘಟ್ಟದಲ್ಲಿ 600ಮೀ. ನಷ್ಟು ಬಾಕ್ಸ್ ಚರಂಡಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ 1.11 ಕೋಟಿ ರೂ. ಬಿಡುಗಡೆಯಾಗಿದ್ದು, ಲೋಕೋಪಯೋಗಿ ಇಲಾಖೆ ಈ ಕಾಮಗಾರಿಯನ್ನು ಅನುಷ್ಠಾನಗೊಳಿಸಲಿದೆ. ಹುಣಸಘಟ್ಟ ಹೊಸಹಳ್ಳಿ ತಾಂಡ್ಯದಲ್ಲಿ, ಸೇವಲಾಲ್ ಭವನಕ್ಕೆ 10 ಲಕ್ಷ ರೂ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭವಾಗಿದೆ. ಲಂಬಾಣಿ ಅಭಿವೃದ್ಧಿ ನಿಗಮದಿಂದ ಈ ಹಣವನ್ನು ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ವೈದ್ಯರ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾದೆ. ಆರೋಗ್ಯ ಕ್ಷೇತ್ರದಲ್ಲಿ ಬಡವರಿಗೆ ಸವಲತ್ತು ಸಿಗುವಂತೆ ಎಲ್ಲ ಕಾಯಿಲೆಗಳಿಗೂ ಸಂಬಂಧ ಪಟ್ಟ ವೈದ್ಯರನ್ನು ತಾಲೂಕು ಆಸ್ಪತ್ರೆಯಲ್ಲಿ ನೇಮಿಸಲಾಗಿದೆ ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ಇಲ್ಲದಂತೆ ನಿಗಾ ವಹಿಸಲಾಗಿದೆ ಎಂದರು.
ತಾಲೂಕಿನಲ್ಲಿ ಅತಿ ಹೆಚ್ಚು ಆಶ್ರಯ ನಿವೇಶವನ್ನು ಹುಣಸಘಟ್ಟ ಗ್ರಾಮಕ್ಕೆ ನೀಡಿದ್ದು, 45 ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲಾಗಿದೆ ಎಂದರು. ಹುಣಸಘಟ್ಟ, ಸಪ್ಪಿನಹಳ್ಳಿ ಹಾಗೂ ಮೇದಿಹಳ್ಳಿ ಗ್ರಾಮಗಳಿಗೆ ಉಬ್ರಾಣಿ ಅಮೃತಾಪುರ ಏತ ನೀರಾವರಿ ಯೋಜನೆಯಡಿ ಅಲ್ಲಿನ ಕೆರೆಗಳನ್ನು ತುಂಬಿಸಿ ನೀರಿನ ಸಮಸ್ಯೆಯನ್ನು ಮುಂದಿನ ಬೇಸಿಗೆಯೊಳಗೆ ಪರಿಹರಿಸಲಾಗುವುದು ಎಂದು ತಿಳಿಸಿದರು.
ಸರಕಾರ ಈಗಾಗಲೇ 2.15 ಕೋ. ರೂ. ವೆಚ್ಚದ ಈ ಯೋಜನೆಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜುರಾತಿಯನ್ನು ನೀಡಿದ್ದು, ಸದ್ಯದಲ್ಲಿ ಟೆಂಡರ್ ಪ್ರಕಟನೆ ನಡೆಸಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಟಿ.ಪಿ.ಎಸ್. ಸದಸ್ಯ ಹಾಲನಾಯ್ಕ, ಗ್ರಾಪಂ ಅಧ್ಯಕ್ಷ ಬಸವರಾಜ್ ನಾಯ್ಕ, ವಿಶ್ವನಾಥ್ ಆರಾಧ್ಯ, ಮಂಜನಾಯ್ಕ, ಗಂಗಾಧರಯ್ಯ, ಎ.ಇ.ಇ, ಧನಂಜಯ್, ಎ.ಇ.ಶ್ರೀನಿವಾಸ್, ಜಗದೀಶ್,ಪಿಡಿಒ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.