ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಶಂಕುಸ್ಥಾಪನೆ
ತರೀಕೆರೆ,ಜೂ.29: ಉಬ್ರಾಣಿ- ಅಮೃತಾಪುರ ಏತ ನೀರಾವರಿ ಯೋಜನೆಯಡಿ ಎರಡು ಕೋಟಿ 15ಲಕ್ಷ ರೂ.ಗಳಲ್ಲಿ ಹುಣಸಘಟ್ಟ ಹಾಗೂ ಮೇದಿಹಳ್ಳಿ ಗ್ರಾಮದ ಕೆರೆಗಳಿಗೆ ನೀರು ಒದಗಿಸುವುದು, ಒಂದು ಕೋಟಿ 10ಲಕ್ಷ ರೂ. ವೆಚ್ಚದಲ್ಲಿ ಅಮೃತಾಪುರ-ನೇರಲಕೆರೆ 1ಕಿ.ಮೀ ರಸ್ತೆ, ಸಪ್ಪನಹಳ್ಳಿ ಅರ್ಧ ಕಿ.ಮೀ ರಸ್ತೆ, ಹುಣಸಘಟ್ಟ ಗ್ರಾಮದಲ್ಲಿ 600 ಮೀ. ಬಾಕ್ಸ್ ಚರಂಡಿ, ಮುಂಡ್ರೆಯಲ್ಲಿ 26 ಲಕ್ಷ ರೂ, ಶಿವನಿ ಆರ್.ಎಸ್. 28 ಲಕ್ಷ ರೂ. ಹಾಗೂ ಬಗ್ಗವಳ್ಳಿಯಲ್ಲಿ 28ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ತಾಲೂಕಿನ ಯಾವುದೇ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಲ್ಲ. ತಾಲೂಕಿನಲ್ಲಿ ಕೆಲವೊಂದು ಕಡೆ ರಸ್ತೆಗಳು ಹದಗೆಟ್ಟಿದ್ದು ಸರಕಾರದ ಯೋಜನೆಯಲ್ಲಿ 28 ಕೋಟಿ ರೂ.ನಲ್ಲಿ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ಹೊಸಳ್ಳಿ ತಾಂಡ್ಯದ ಸೇವಾಲಾಲ್ ಸಮುದಾಯ ಭವನಕ್ಕೆ 10ಲಕ್ಷ ರೂ. ನೀಡಿದ್ದೇನೆ. ಹುಣಸಘಟ್ಟ ಗ್ರಾಪಂ ವ್ಯಾಪ್ತಿಗೆ ವಸತಿ ಯೋಜನೆಯಲ್ಲಿ 45 ಮನೆ ನೀಡಲಾಗಿದೆ. ಹಾದಿಕೆರೆ ಭಾಗದಲ್ಲಿ ನೀರು ಪೂರೈಸಲು 58 ಲಕ್ಷ ರೂ. ಗಳ ಅಂದಾಜು ಪಟ್ಟಿ ತಯಾರಿಸಿ ಅನುಮೋದನೆಗೆ ನೀಡಲಾಗಿದೆ ಎಂದರು.
ತಾಪಂ ಸದಸ್ಯ ಹಾಲನಾಯ್ಕ ಮಾತನಾಡಿ, ಹುಣಸಘಟ್ಟ ವ್ಯಾಪ್ತಿಯಲ್ಲಿ ಬರಗಾಲ ದಿಂದ ರೈತರಿಗೆ ಬೆಳೆ ನಷ್ಟವಾಗಿದ್ದು ಪರಿಹಾರಕ್ಕೆ ಶಾಸಕರು ಪ್ರಯತ್ನಿಸಲಿ. ಏತ ನೀರಾವರಿ ಯೋಜನೆಯಲ್ಲಿ ತಾಂಡ್ಯ ಗ್ರಾಮಕ್ಕೆ ನೀರು ಕಲ್ಪಿಸಲು ಕ್ರಮವಹಿಸಲಿ ಎಂದರು.
ಹುಣಸಘಟ್ಟ ಗ್ರಾಮಸ್ಥರು ಮಾತನಾಡಿ, ಪಶು ವೈದ್ಯ ಆಸ್ಪತ್ರೆಗೆ ಕಾಂಪೌಂಡ್ ಇಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಕೊರತೆ ಇದೆ. ಪ್ರಾಥಮಿಕ ಶಾಲೆಗೆ ಮುಖ್ಯೋಪಾಧ್ಯಾರ ಕೊರತೆ ಇದೆ. ರಸ್ತೆಗಳನ್ನು ಅಭಿವೃದ್ಧಿಪಡಿಸಿ ಎಂದು ಮನವಿ ಮಾಡಿದರು.
ಮಂಡ್ರೆ ಗ್ರಾಮಸ್ಥರು ಮಾತನಾಡಿ, ಹತ್ತಾರು ವರ್ಷದ ಪಶು ಆಸ್ಪತ್ರೆಯ ಬೇಡಿಕೆ ಈಡೇರಿದೆ. ತಾಲೂಕಿನ ಗಡಿ ಭಾಗವಾಗಿರುವ ಗ್ರಾಮಕ್ಕೆ ಕುಡಿಯುವ ನೀರಿಗೆ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹುಣಸಘಟ್ಟ ಗ್ರಾಪಂ ಅಧ್ಯಕ್ಷ ಬಸವರಾಜ ನಾಯ್ಕ, ಕುಡ್ಲೂರು ಗ್ರಾಪಂ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ತಾಯಿಬಾಯಿ, ಸದಸ್ಯೆ ಶಾರದಮ್ಮ, ಈಶ್ವರಪ್ಪ, ಜೆ.ಇ. ಶ್ರೀನಿವಾಸ್, ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹನುಮಂತನಾಯ್ಕ ಕಾರಬಾರಿ, ವೈದ್ಯರಾದ ಚೇತನ್, ಬಿರಾದರ್, ಸಿಬ್ಬಂದಿಯಾದ ಜಗದೀಶ್, ರೇವಣಸಿದ್ದಪ್ಪ, ಮುಖಂಡರಾದ ಜಗದೀಶ್, ಗಂಗಾಧರಯ್ಯ, ಉಮಾಪತಿ, ಮಲ್ಲಿಕಾರ್ಜುನ, ಮತ್ತಿತರರು ಉಪಸ್ಥಿತರಿದ್ದರು.