×
Ad

ಅಂಬೇಡ್ಕರ್ ನೆನಪಿನ ಪ್ರಿಂಟಿಂಗ್ ಪ್ರೆಸ್‌ ಧ್ವಂಸ: ಖಂಡನೆ

Update: 2016-06-29 23:50 IST

ಬೆಂಗಳೂರು, ಜೂ.29: ಮುಂಬೈನ ದಾದರ್‌ನಲ್ಲಿರುವ ಅಂಬೇಡ್ಕರ್ ನೆನಪಿನ ಬುದ್ಧಭೂಷಣ ಪ್ರಿಂಟಿಂಗ್ ಪ್ರೆಸ್‌ನ್ನು ಕೋಮುವಾದಿಗಳು ಧ್ವಂಸ ಮಾಡಿರುವುದನ್ನು ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ಖಂಡಿಸಿದೆ.
 ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ದಲಿತ ಸಂಘಟನೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಮಹಾರಾಷ್ಟ್ರದಲ್ಲಿರುವ ಈ ಪ್ರಿಂಟಿಂಗ್ ಪ್ರೆಸ್ ಮೂಲಕ ಅಂಬೇಡ್ಕರ್ ಶೋಷಿತ ವರ್ಗದ ಜನರನ್ನು ಶಿಕ್ಷಿತರನ್ನಾಗಿ ಮಾಡಿ ಚಳವಳಿಗೆ ಪ್ರೇರೇಪಿಸುತ್ತಿದ್ದರು. ಇಂದಿಗೂ ಹಲವು ಪ್ರಗತಿಪರ ವಿಚಾರಗಳನ್ನು ಬಿಂಬಿಸುವ ಶಕ್ತಿ ಕೇಂದ್ರವಾಗಿದೆ. ಅಂತಹ ಶಕ್ತಿ ಕೇಂದ್ರದ ಮೇಲೆ ಜೂ.25 ರಂದು ಕೋಮುವಾದಿ ಸಂಘಟನೆಗಳು ದಾಳಿ ಮಾಡಿ ಧ್ವಂಸ ಮಾಡಿರುವುದು ಖಂಡನೀಯ. ಈ ಮೂಲಕ ಕೋಮುವಾದಿಗಳು ಮಾನವೀಯ ವೌಲ್ಯಗಳಿಗಾಗಿ ಪ್ರಶ್ನೆ ಮಾಡುವವರನ್ನು ಹತ್ತಿಕ್ಕುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಅಂಬೇಡ್ಕರ್ ಪರಿನಿಬ್ಬಾಣ ದಿನದಂದು 1992 ರಲ್ಲಿ ಬಾಬರಿ ಮಸೀದಿ ಕೆಡವಿದ್ದ ಬಿಜೆಪಿ ಸರಕಾರ ಮತ್ತು ಕೋಮುವಾದಿಗಳು ಇದೀಗ ಮತ್ತೆ ಅಂಬೇಡ್ಕರ್ ನೆನಪಿನ ಪ್ರಿಂಟಿಂಗ್ ಪ್ರೆಸ್‌ನ್ನು ಧ್ವಂಸ ಮಾಡುವ ಮೂಲಕ ಶೋಷಿತರನ್ನು ಬಲಿಪಶುಗಳನ್ನಾಗಿಸಲು ಪ್ರಯತ್ನಿಸಿಸುತ್ತಿದ್ದಾರೆ. ಹಾಗೂ ಅಂಬೇಡ್ಕರ್ ವಿಚಾರಧಾರೆಗಳನ್ನು ನಾಶಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಿಂಟಿಂಗ್ ಪ್ರೆಸ್ ಧ್ವಂಸದ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಕೈವಾಡವಿದ್ದು, ರತ್ನಾಕರ ಗಾಯಕವಾಡ ಎಂಬ ಆರೆಸ್ಸೆಸ್ ಮುಖಂಡನಿಗೆ ಧ್ವಂಸ ಮಾಡಲು 60 ಕೋಟಿ ರೂ ಸುಫಾರಿ ನೀಡಿದ್ದಾರೆ. ಗೃಹ ಖಾತೆಯನ್ನು ತನ್ನಲ್ಲಿಯೆ ಇಟ್ಟುಕೊಂಡು ಪೊಲೀಸರನ್ನು ತನ್ನ ಕೈ ಗೊಂಬೆಯಂತೆ ಮಾಡಿಕೊಂಡು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಸ್ಥಳದಲ್ಲಿ ಸುಮಾರು 600 ಕೋಟಿ ವೆಚ್ಚದಲ್ಲಿ 18 ಹಂತಗಳ ಬಿಲ್ಡಿಂಗ್ ನಿರ್ಮಾಣ ಮಾಡಲು ಪ್ರಯತ್ನ ಮಾಡಲಾಗಿದೆ ಎಂದು ಆಪಾದಿಸಿದ ಅವರು, ದಲಿತ ವಿರೋಧಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News