ರಮಝಾನ್ ಮಾನವೀಯ ನೆಲೆಯಲ್ಲಿ ಹೆಚ್ಚು ಪ್ರಸ್ತುತ
ಇಸ್ಲಾಂನ ಆಚರಣೆಗಳಲ್ಲಿ ರಮಝಾನಿನ ಒಂದು ತಿಂಗಳ ಉಪವಾಸ ಹಾಗೂ ಇದೇ ಸಂದರ್ಭದಲ್ಲಿ ಮಾಡುವ ದಾನ ಧರ್ಮಗಳು ಮಾನವೀಯ ನೆಲೆಯಲ್ಲಿ ಹೆಚ್ಚು ಪ್ರಸ್ತುತವಾಗಿದೆ. ತಾನು ಉಪವಾಸ ಮಾಡಿಯಾದರೂ ಬಡವರಿಗೆ, ದುರ್ಬಲರಿಗೆ, ಹಸಿದವರಿಗೆ ದಾನ ಮಾಡಬೇಕು ಎಂಬ ಸಂದೇಶ ಇಲ್ಲಿ ಅಡಕವಾಗಿದೆ. ಎಲ್ಲಾ ದೈಹಿಕ ಮತ್ತು ಮಾನಸಿಕ ವಾಂಛೆಗಳನ್ನು ನಿಯಂತ್ರಿಸಿ ದೇವರ ಹೆಸರಿನಲ್ಲಿ ಮಾಡುವ ಸತ್ಕರ್ಮವೆಂದು ಹೇಳಬಹುದು.
‘ಹಸಿದವನಿಗೆ ಗೊತ್ತು ಅನ್ನದ ಬೆಲೆ’ ಎನ್ನುವ ಹಾಗೆ ತಾನು ಹಸಿದಿದ್ದಾಗ ಮಾತ್ರ ಇನ್ನೊಬ್ಬನ ಹಸಿವಿನ ಭೂತ ಎಷ್ಟು ಭಯಂಕರವಾದುದು ಎಂದು ಅರಿವಾಗಲು ಸಾಧ್ಯ. ದೇವರ ಸೃಷ್ಟಿಯಲ್ಲಿ ಶ್ರೀಮಂತನೂ, ಬಡವನೂ ಎರಡು ಧ್ರುವಗಳಿದ್ದಂತೆ. ಇವರ ಮಧ್ಯೆ ಮಾನವನ ಹುಟ್ಟಿನಿಂದ ಇಲ್ಲಿಯವರೆಗೆ ಅದು ಬೆಳೆದು ಬಂದಿದೆ. ಮುಂದೆಯೂ ಇರುತ್ತದೆ. ಆದರೆ ಅಂತರವನ್ನು ಕಡಿಮೆ ಮಾಡಲು ಇಂತಹ ಧರ್ಮಾಚರಣೆಗಳು ಸಹಕಾರಿಯಾಗಿದೆ. ಮಾನವರೆಲ್ಲಾ ಸಹೋದರರು, ದೇವರ ಮಕ್ಕಳು ಎಂದು ಎಲ್ಲಾ ಧರ್ಮಗಳು ಸಾರಿವೆ. ಆದರೆ ಮಾನವ ಮಾತ್ರ ಸಂಕುಚಿತವಾಗಿದ್ದಾನೆ. ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ದುರ್ಬಲರ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ಅರಬ್ ದೇಶಗಳಲ್ಲಿ ಅಂದಿನ ಕಾಲದ ಪರಿಸ್ಥಿತಿಯನ್ನು ಗಮನಿಸಿ ರಮಝಾನ್ ಆಚರಣೆ ಕಡ್ಡಾಯಗೊಳಿಸಿರಬಹುದು.
’ದಯವೇ ಧರ್ಮದ ಮೂಲ. ದಯೆಯಿಲ್ಲದ ಧರ್ಮವಾವುದಯ್ಯಾ ದಯೆ ಬೇಕು ಸಕಲ ಪ್ರಾಣಿಗಳಲ್ಲಿ’ ಎಂಬ ಬಸವಣ್ಣನರ ವಚನದಂತೆ ಧರ್ಮದ ಮೂಲಕ ಮಾನವ ದಯೆ, ಪ್ರೀತಿ, ಕರುಣೆಯನ್ನು ನೆನಪಿಸುವ ಕಾರ್ಯ ರಮಝಾನ್ ಉಪವಾಸ ಆಚರಣೆ-ಝಕಾತ್ ಮೂಲಕ ನಡೆಯುತ್ತಿದೆ ಎಂಬುದು ನನ್ನ ಭಾವನೆ.
ಹಬ್ಬ ಆಚರಣೆ ಸಂಭ್ರಮದಿಂದ ಕೂಡಿರುತ್ತದೆ. ಬಂಧು-ಬಾಂಧವರು, ಮಿತ್ರರು, ಜಾತಿ-ಮತ ಭೇದವಿಲ್ಲದೆ ಆಚರಿಸಿದರೆ ಸಂತೋಷ ಹೆಚ್ಚು. ಮಾನವ ಸಮಾಜಕ್ಕೆ ಒಳಿತು. ಸಮಾಜದ ಎಲ್ಲಾ ಜಾತಿ-ಮತ ಬಾಂಧವರು ಪಾಲ್ಗೊಂಡರೆ ಅದು ಸಾಮಾಜಿಕ ಹಬ್ಬವಾಗುತ್ತದೆ. ನಮ್ಮೂರಿನ ವ್ಯಾಪಾರಸ್ಥರೊಬ್ಬರು ರಮಝಾನ್ ಸಮಯದಲ್ಲಿ ಸಂಜೆ ಹೊತ್ತಿಗೆ ಉಪವಾಸ ಬಿಡುವ ವೇಳೆಗೆ ಅಲ್ಲಿದ್ದವರೆಲ್ಲರನ್ನು ಜಾತಿ-ಮತ ನೋಡದೆ ಕರೆದು ತಂಪು ಪಾನೀಯ ಹಾಗೂ ಸಮೂಸ ನೀಡಿ ಸಂಭ್ರಮಿಸುವುದನ್ನು ನಾನು ಕಂಡಿದ್ದೇನೆ.
ಕೆಲವು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಹಲವೆಡೆಗಳಲ್ಲಿ ಸಮಾಜದ ಕೆಲವು ಗಣ್ಯರು ಏರ್ಪಡಿಸಿದ ಸೌಹಾರ್ದ ಇಫ್ತಾರ್ ಕೂಟಗಳಲ್ಲಿ ನಾನು ಭಾಗವಹಿಸಿದ್ದೇನೆ. ಆ ಕೂಟಗಳಲ್ಲಿ ಜಾತಿ,ಮತ ಬೇಧವಿಲ್ಲದೆ ಭಾಗವಹಿಸುತ್ತಿದ್ದರು. ಮನೆಯವರ ವಿಶೇಷ ಆತಿಥ್ಯ, ಆದರ ಗೌರವ, ಭೋಜನ ಕೂಟ ಇವೆಲ್ಲವೂ ಸಾಮಾಜಿಕ ಸಾಮರಸ್ಯ, ಸೌಹಾರ್ದತೆಗೆ ಸಾಕ್ಷಿಯಾಗಿತ್ತು. ಕೆಲವೊಮ್ಮೆ ರಾಜಕೀಯ ನೇತಾರರ ಸಮಾವೇಶದಂತೆ ಇರುತ್ತಿದ್ದರೂ ಒಟ್ಟಿನಲ್ಲಿ ಸಮಾಜದ ಎಲ್ಲಾ ಬಂಧುಗಳು ಮುಕ್ತ ಮನಸ್ಸಿನಿಂದ ಬೆರೆತು ಮಾತನಾಡುತ್ತಿದ್ದರು. ಸಂತೋಷವನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಅಂತಹ ಇಫ್ತಾರ್ ಕೂಟಗಳು ಕಡಿಮೆಯಾಗಿರುವುದು ಮಾತ್ರ ವಿಪರ್ಯಾಸ. ಸಮಾಜದ ಸರ್ವ ಬಾಂಧವರನ್ನು ಸೇರಿಸುವ ಇಫ್ತಾರ್ ಕೂಟಗಳು ಸಾಮಾಜಿಕ ಶಾಂತಿ, ಸೌಹಾರ್ದತೆ, ಸಾಮರಸ್ಯಕ್ಕೆ ಆವಶ್ಯಕವಾಗಿದೆ. ಅದಿಲ್ಲದಿದ್ದರೆ ಮಾನವ ಪ್ರೀತಿಗೆ ಎಲ್ಲೋ ಲೋಪವಾಗಿದೆ ಎಂದೆಣಿಸುತ್ತದೆ.
ಜಯಾನಂದ ಪೆರಾಜೆ
ಅಧ್ಯಕ್ಷರು, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್.