×
Ad

ಶಾಲಾ ಮಕ್ಕಳಿಗೆ ಐದು ದಿನ ಉಚಿತ ಹಾಲು: ಸಿಎಂ

Update: 2016-06-30 18:48 IST

ಬೆಂಗಳೂರು, ಜೂ.30: ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ಉಚಿತ ಹಾಲನ್ನು ಕೊಡಲಾಗುತ್ತಿದೆ. ಇದನ್ನು 5 ದಿನಕ್ಕೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗುರುವಾರ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಗರದ ಬೆಂಗಳೂರು ಡೇರಿ ಆವರಣದಲ್ಲಿ ಆಯೋಜಿಸಿದ್ದ ಹೊಸಕೋಟೆ ಡೇರಿ ಮತ್ತು ಉತ್ಪನ್ನ ಘಟಕದ ಉದ್ಘಾಟನೆ ಹಾಗೂ ಉಗ್ರಾಣ, ಮಾರುಕಟ್ಟೆ ಕಚೇರಿ, ಉಪಾಹಾರಗೃಹ ಮತ್ತು ಸಭಾಂಗಣದ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಸದ್ಯ ವಾರದಲ್ಲಿ ಮೂರು ದಿನ ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲನ್ನು ಕೊಡಲಾಗುತ್ತಿದೆ. ಇದರಿಂದ ಶಾಲೆಯಲ್ಲಿ ಹಾಜರಾತಿಯ ಸಂಖ್ಯೆ ಹೆಚ್ಚುತ್ತಿದೆ. ಹಾಗೂ ಮಕ್ಕಳ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ಹೀಗಾಗಿ ಮೂರು ದಿನ ಕೊಡುತ್ತಿರುವ ಹಾಲನ್ನು ಐದು ದಿನಕ್ಕೆ ವಿಸ್ತರಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಆತ್ಮಹತ್ಯೆ ಪರಿಹಾರವಲ್ಲ: ಕೃಷಿಯಲ್ಲಿ ನಷ್ಟ ಉಂಟಾಯಿತು ಎಂದು ರೈತರು ಆತ್ಮಹತ್ಯೆ ಮಾಡಿಕೊಂಡರು. ಬೆಳೆ ನಷ್ಟವಾದರೆ ಆತ್ಮಹತ್ಯೆವೊಂದೆ ಪರಿಹಾರವಲ್ಲ ಎಂಬುದನ್ನು ರೈತರ ಅರ್ಥ ಮಾಡಿಕೊಳ್ಳಬೇಕು. ಕೃಷಿಯ ಜೊತೆಗೆ ಹೈನುಗಾರಿಕೆ, ತೋಟಗಾರಿಕೆ, ಕುರಿಸಾಕಾಣಿಕೆ ಸೇರಿದಂತೆ ಹಲವು ಉಪ ಕಸುಬುಗಳನ್ನು ಮಾಡುವುದರ ಮೂಲಕ ಬದುಕನ್ನು ಆತ್ಮವಿಶ್ವಾಸದ ಕಡೆಗೆ ಸಾಗಿಸಲು ಪಣ ತೊಡಬೇಕೆಂದು ಅವರು ಕಿವಿಮಾತು ಹೇಳಿದರು.

ಇಂದಿನ ಯುವಕರು ಕೇವಲ ಎಂಬಿಬಿಎಸ್, ಎಂಜಿನಿಯರಿಂಗ್, ಕೆಎಎಸ್ ಇಲ್ಲವೆ ಐಎಎಸ್ ಹುದ್ದೆಗಳೆ ಶ್ರೇಷ್ಠವೆಂದು ತಿಳಿಯಬಾರದು. ಸ್ವಯಂ ಉದ್ಯೋಗವನ್ನು ಮಾಡುವುದರ ಮೂಲಕ ಸ್ವಾಭಿಮಾನದ ಜೀವನವನ್ನು ನಡೆಸುವುದರ ಕಡೆಗೆ ದಿಟ್ಟಹೆಜ್ಜೆ ಇಡಬೇಕು. ಇದಕ್ಕೆ ಬೇಕಾದ ಅಗತ್ಯನೆರವನ್ನು ನೀಡಲು ಸಹಕಾರ ಸಿದ್ದವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ವಿನಯ್ ಕುಲಕರ್ಣಿ ಸುಮಾರು 3 ಸಾವಿರ ಹಸುಗಳನ್ನು ಸಾಕುವುದರ ಮೂಲಕ ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ತಿಂಗಳಿಗೆ ಲಕ್ಷಾಂತರ ರೂ. ಆದಾಯವನ್ನು ಗಳಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ನಿರುದ್ಯೋಗಿ ಯುವಕರು ಹೈನುಗಾರಿಕೆ ಸೇರಿದಂತೆ ಸ್ವಂತ ವ್ಯವಹಾರದಲ್ಲಿ ತೊಡಗಲಿ ಎಂದು ಅವರು ಆಶಿಸಿದರು.
  ಪಂಶುಸಂಗೋಪನಾ ಮತ್ತು ರೇಷ್ಮೆ ಸಚಿವ ಎ.ಮಂಜು ಮಾತನಾಡಿ, ಕೃಷಿ ಬೆಳೆಗಳಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದರೆ, ಹೈನುಗಾರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ಒಂದೇ ಒಂದು ಪ್ರಕರಣವು ಕಂಡುಬರುವುದಿಲ್ಲ. ಅದರಲ್ಲೂ ರಾಜ್ಯ ಸರಕಾರ ಪ್ರತಿ ಲೀಟರ್‌ಗೆ 4 ರೂ.ಪ್ರೋತ್ಸಾಹ ಧನ ಕೊಟ್ಟ ನಂತರ ಹಾಲಿನ ಉತ್ಪಾದನೆ ದ್ವಿಗುಣವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಕಲಬೆರಕೆ ತಡೆಯಬೇಕು: ತಮಿಳುನಾಡು, ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬರುವ ಕಳಪೆ ಗುಣಮಟ್ಟದ ಹಾಲನ್ನು ತಡೆಯುವ ಅಗತ್ಯವಿದೆ. ಇದನ್ನು ತಡೆದರೆ ಬೆಂಗಳೂರಿನಲ್ಲಿ ಸುಮಾರು 5 ಲಕ್ಷ ಲೀಟರ್ ಹೆಚ್ಚಿನ ಹಾಲು ಮಾರಾಟವಾಗಲಿದೆ. ಹೀಗಾಗಿ ಕಲಬೆರಕೆ ಹಾಲನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ವಿಧಾನಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ರಮೇಶ್ ಮತ್ತಿತರರಿದ್ದರು.


ನಂದಿನ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಿ
ಬೆಂಗಳೂರು ಸಹಕಾರ ಹಾಲು ಒಕ್ಕೂಟವು ನಂದಿನಿ ಹೆಸರಿನಲ್ಲಿ ಸುಮಾರು 64 ಉತ್ಪನ್ನಗಳನ್ನು ತಯಾರಿಸುತ್ತಿದೆ. ಆದರೆ, ಈ ಉತ್ಪನ್ನಗಳ ಗುಣಮಟ್ಟ ಹೆಚ್ಚಾದರೆ ಮಾತ್ರ ಉತ್ತಮ ಮಾರುಕಟ್ಟೆ ಸಿಗಲು ಸಾಧ್ಯ. ನಂದಿನ ಹಾಲು ರಾಜ್ಯಕ್ಕೆ ಸೀಮಿತವಾಗದೆ, ಅಂತರ್ ರಾಜ್ಯ ಹಾಗೂ ವಿದೇಶಗಳಿಗೆ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು.
-ಸಿದ್ದರಾಮಯ್ಯ ಮುಖ್ಯಮಂತ್ರಿ

 ಕನಕಪುರ ಸಮೀಪ 44.5ಎಕರೆ ಜಮೀನಿನಲ್ಲಿ ಅತ್ಯಾಧುನಿಕ ಸ್ವಯಂ ಚಾಲಿತ ಡೇರಿ ಸಂಕೀರ್ಣವನ್ನು 450 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಹೀಗಾಗಿ ರಾಜ್ಯ ಸರಕಾರ ಆರ್‌ಕೆವಿವೈ ಯೋಜನೆಯಡಿ ಪ್ರತಿವರ್ಷ 50 ಕೋಟಿ ರೂ.ನಂತೆ ಮೂರು ವರ್ಷ 150 ಕೋಟಿ ರೂ.ಧನ ಸಹಾಯ ಮಾಡಬೇಕು. ಇನ್ನು ಉಳಿದ ವೆಚ್ಚವನ್ನು ಒಕ್ಕೂಟವೆ ಭರಿಸಲಿದೆ.
-ಕೆ.ರಮೇಶ್ ಅಧ್ಯಕ್ಷ ಬೆಂಗಳೂರು ಸಹಕಾರ ಹಾಲು ಒಕ್ಕೂಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News