×
Ad

ರಾತ್ರಿ ಉಳುಮೆ ಮಾಡುತ್ತಿದ್ದಾರೆಂದು ಟ್ರ್ಯಾಕ್ಟರ್ ವಶಕ್ಕೆ

Update: 2016-06-30 23:09 IST

ಶಿವಮೊಗ್ಗ,ಜೂ.30: ರಾತ್ರಿ ವೇಳೆ ಜಮೀನು ಉಳುಮೆ ಮಾಡುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಟ್ರ್ಯಾಕ್ಟರ್‌ನ್ನು ವಶಕ್ಕೆ ಪಡೆದು, 22 ಸಾವಿರ ರೂ. ದಂಡ ಕಟ್ಟುವಂತೆ ಸೂಚಿಸಿ, ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ ಎಂದು ಶಿವಮೊಗ್ಗ ತಾಲೂಕಿನ ಹಾರ್ನಳ್ಳಿ ಜಿಪಂ ವ್ಯಾಪ್ತಿಯ ರಟ್ಟೆಹಳ್ಳಿ ಗ್ರಾಮದ ವಿಧವಾ ರೈತ ಮಹಿಳೆ ಮೀನಾಕ್ಷಮ್ಮ ಎಂಬವರು ಆರೋಪಿಸಿದ್ದಾರೆ. ಈ ಕುರಿತಂತೆ ಗುರುವಾರ ನಗರದ ಜಿಪಂ ಕಚೇರಿಯಲ್ಲಿ ಲೋಕಸಭಾ ಸದಸ್ಯರೂ ಆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಬಳಿ ತಮ್ಮ ಅಳಲು ತೋಡಿಕೊಂಡರು. ಅರಣ್ಯ ಇಲಾಖೆಯಿಂದ ತಮಗಾಗಿರುವ ಅನ್ಯಾಯಕ್ಕೆ ನ್ಯಾಯ ಕಲ್ಪಿಸುವಂತೆ ಮನವಿ ಮಾಡಿಕೊಂಡರು. ಮಹಿಳೆಯ ಮನವಿ ಆಲಿಸಿದ ಬಿ.ಎಸ್.ಯಡಿಯೂರಪ್ಪರವರು ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿಯವರಿಗೆ ಸೂಚನೆ ನೀಡಿದರು. ಪ್ರಕರಣ ದಾಖಲು: ಪತಿಯನ್ನು ಕಳೆದುಕೊಂಡಿರುವ ಮೀನಾಕ್ಷಮ್ಮರವರು 1 ಎಕರೆ ಪ್ರದೇಶದಲ್ಲಿ, ಹಾಗೂ ಅವರ ತಂದೆ ಕುಮಾರಪ್ಪರವರು ಎರಡು ಎಕರೆ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ಬಾಡಿಗೆ ಟ್ರ್ಯಾಕ್ಟರ್ ಪಡೆದು ಜಮೀನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಜಮೀನಿಗೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ವೇಳೆ ಜಮೀನು ಸಿದ್ಧಪಡಿಸುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಟ್ರ್ಯಾಕ್ಟರ್ ವಶಕ್ಕೆ ಪಡದುಕೊಂಡಿದ್ದಾರೆ ಎಂದು ಸ್ಥಳೀಯ ಮುಖಂಡ ಬೋಜ್ಯನಾಯ್ಕಾರವರು ತಿಳಿಸಿದ್ದಾರೆ. ಪ್ರಸ್ತುತ 22 ಸಾವಿರ ರೂ. ನೀಡುವಂತೆ ಅರಣ್ಯ ಇಲಾಖೆಯವರು ತಿಳಿಸಿದ್ದಾರೆ. ಜೊತೆಗೆ ಕೇಸ್ ಹಾಕುವುದಾಗಿಯೂ ಬೆದರಿಕೆ ಹಾಕುತ್ತಿದ್ದಾರೆ. ಮತ್ತೊಂದೆಡೆ ಟ್ರ್ಯಾಕ್ಟರ್ ಮಾಲಕರು ಮಹಿಳೆಗೆ ವಾಹನ ಬಿಡಿಸಿಕೊಡುವಂತೆ ಕೇಳುತ್ತಿದ್ದಾರೆ. ಇದರಿಂದ ಬಡ ಮಹಿಳೆಯು ದಿಕ್ಕು ಕಾಣದೆ ಕಂಗಲಾಗುವಂತೆ ಮಾಡಿದೆ ಎಂದು ಸಂಸದರಿಗೆ ವಿವರಿಸಿದರು. ಮಹಿಳೆಯು ಸಾಗುವಳಿ ಮಾಡುತ್ತಿರುವ ಜಮೀನಿನ ಜಿಪಿಎಸ್ ಸರ್ವೇ ಕೂಡ ಮಾಡಲಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಕೂಡ ಹಾಕಿದ್ದಾರೆ. ಇದೀಗ ಸಾಗುವಳಿ ಮಾಡಲು ಅರಣ್ಯ ಇಲಾಖೆಯವರು ಅಡ್ಡಿ ಮಾಡುತ್ತಿದ್ದಾರೆ ಎಂದು ಬೋಜ್ಯನಾಯ್ಕ್ಕಾರವರು ಹೇಳಿದರು. ಸಭೆಯಲ್ಲಿ ಚರ್ಚೆ:

ಈ ವಿಷಯದ ಬಗ್ಗೆ ಜಿಪಂ ಸದಸ್ಯ ವೀರಭದ್ರಪ್ಪ ಪೂಜಾರ್‌ರವರು ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಪ್ರಸ್ತಾಪಿಸಿ, ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪರವರ ಗಮನಕ್ಕೆ ತಂದರು. ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮಹಿಳೆಗೆ ತೊಂದರೆ ಕೊಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕೇಸ್ ಹಾಕುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News