×
Ad

ಸಾಗರ: ಒಳಚರಂಡಿ ಕಾಮಗಾರಿಯಿಂದ ಸಂಚಾರಕ್ಕೆ ಅಡಚಣೆ

Update: 2016-06-30 23:10 IST

ಸಾಗರ,ಜೂ.30: ನಗರದ ಕೆಲವು ಭಾಗಗಳಲ್ಲಿ ಒಳಚರಂಡಿ ಕಾಮಗಾರಿಯಿಂದ ರಸ್ತೆ ಹಾಳಾಗಿ ಜನ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್ ಹೇಳಿದ್ದಾರೆ. ನಗರದ ವಿವಿಧ ಬಡಾವಣೆಗಳಲ್ಲಿ ಒಳಚರಂಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆಯನ್ನು ಗುರುವಾರ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಳಚರಂಡಿ ಕಾಮಗಾರಿಗಾಗಿ ಪೈಪ್‌ಲೈನ್ ಹಾಗೂ ಮ್ಯಾನ್‌ಹೋಲ್ ನಿರ್ಮಾಣಕ್ಕೆ ರಸ್ತೆ ಅಗೆಯಲಾಗಿದೆ. ಇದರಿಂದ ಕೆಲವು ರಸ್ತೆಗಳು ಪೂರ್ಣ ಹಾಳಾಗಿದೆ ಎಂದರು. ಇನ್ನು ನಗರದ ಕೆಲವು ಭಾಗಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಒಂದೆರಡು ಕಡೆಗಳಲ್ಲಿ ರಸ್ತೆ ಕುಸಿದಿರುವ ಬಗ್ಗೆ ಮಾಹಿತಿ ಇದ್ದು, ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು. ವೆಂಕಟರಮಣಸ್ವಾಮಿ ದೇವಸ್ಥಾನ, ಜೋಸೆಫ್ ನಗರ, ಗಣಪತಿ ದೇವಸ್ಥಾನ, ಎಸ್.ಎನ್.ನಗರದ ಕೆಲವು ಭಾಗ, ಇಂದಿರಾ ನಗರ ಇನ್ನಿತರೆ ಭಾಗಗಳಲ್ಲಿ ಜಲ್ಲಿ ಹಾಕಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಳೆ ಪ್ರಾರಂಭವಾಗಿರುವುದರಿಂದ ಕೆಲವು ಕಡೆಗಳಲ್ಲಿ ಕಾಮಗಾರಿ ನಿರ್ವಹಣೆಗೆ ತೊಡಕಾಗಿದೆ. ಶೀಘ್ರದಲ್ಲಿ ಕೆಸರಿನಿಂದ ತುಂಬಿರುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ನಗರವ್ಯಾಪ್ತಿಯ ಅಭಿವೃದ್ಧಿಗಾಗಿ 3 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಕರೆಯಲಾಗಿದೆ. ಹೆಚ್ಚುವರಿಯಾಗಿ 10 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಸಚಿವರಾದ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಇದರಿಂದ ನಗರವ್ಯಾಪ್ತಿಯಲ್ಲಿ ಹೆಚ್ಚಿನ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಶ್ರೀನಾಥ್ ಮಾತನಾಡಿ, ಒಳಚರಂಡಿ ಕಾಮಗಾರಿ ಮುಗಿದ ಮೇಲೆ ನಗರ ಅತ್ಯಂತ ಮಾದರಿಯಾಗಿ ರೂಪುಗೊಳ್ಳುತ್ತದೆ. ಕಾಮಗಾರಿ ನಿರ್ವಹಣೆ ಸಂದರ್ಭದಲ್ಲಿ ಜನರಿಗೆ ಆಗಿರುವ ತೊಂದರೆಗೆ ನಗರಸಭೆ ವಿಷಾದಿಸುತ್ತದೆ. ಈಗಾಗಲೇ ಹೊಂಡಗುಂಡಿ ಬಿದ್ದ ಕಡೆಗಳಲ್ಲಿ ಜಲ್ಲಿ ಹಾಕಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ಪ್ರಭಾರಿ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗಪ್ಪ, ಹಿರಿಯ ಅಭಿಯಂತರ ವಿಠ್ಠಲ್ ಹೆಗಡೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News