ನವೀಕೃತ ಬಸ್ ನಿನಿಲ್ದಾಣಕ್ಕೆ ಬಳಿದ ಬಣ್ಣ ನೀರುಪಾಲು
ಮೂಡಿಗೆರೆ, ಜೂ.30: ಇತೀಚೆಗೆ ಪಟ್ಟಣದ ನವೀಕೃತ ಬಸ್ ನಿಲ್ದಾಣದ ಉದ್ಘಾಟನೆ ಗೊಂಡಿದ್ದು, ಈ ಸಂಬಂಧ ಬಸ್ ನಿಲ್ದಾಣಕ್ಕೆ ಸುಣ್ಣ ಬಣ್ಣವನ್ನು ತರಾತುರಿಯಲ್ಲಿ ಮಾಡಲಾಗಿತ್ತು. ಆದರೆ ಇದೀಗ ಬಸ್ ನಿಲ್ದಾಣದ ಕಾಂಪೌಂಡಿಗೆ ಬಳಿದಿದ್ದ ಬಣ್ಣ ಸಂಪೂರ್ಣವಾಗಿ ಮಳೆ ನೀರಿಗೆ ಕೊಚ್ಚಿ ಹೋಗಿದೆ. ಇದನ್ನು ಕಂಡ ಸಾರ್ವಜನಿಕರು ಕಳಪೆ ಗುಣಮಟ್ಟದ ಬಣ್ಣವನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಮಗಳೂರು ವಿಭಾಗದಿಂದ ಹಮ್ಮಿಕೊಂಡಿದ್ದ ಮೂಡಿಗೆರೆ ನವೀಕೃತ ಬಸ್ ನಿಲ್ದಾಣದ ಉದ್ಘಾಟನೆ, ನಿಲ್ದಾಣದ ಆವರಣದ ಮೊದಲನೆ ಹಂತದ ಕಾಂಕ್ರಿಟೀಕರಣ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಬಸ್ ನಿಲ್ದಾಣ ಮತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ರಾಮಲಿಂಗಾರೆಡ್ಡಿ ನೆರವೇರಿಸಿದ್ದರು. ಸುಮಾರು 5ವರ್ಷಗಳಿಂದ ಬಸ್ ನಿಲ್ದಾಣ ಕಾಮಗಾರಿ ಆಮೆಗತಿಯಲ್ಲಿ ನಡೆದುಕೊಂಡು ಬಂದಿದ್ದು, ಕೊನೆಗೂ ಮುಕ್ತಾಯದ ಹಂತ ಕಂಡು ಉದ್ಘಾಟನೆ ಮಾಡುವ ವಿಷಯ ತಿಳಿಯುತ್ತಿದ್ದಂತೆ ಜನರು ಸಂತಸ ವ್ಯಕ್ತಪಡಿಸಿದ್ದರು.
ಬಸ್ ನಿಲ್ದಾಣದ ಒಳಗೆ ಪ್ರಯಾಣಿಕರಿಗೆಂದು ಕೂರಲು ವ್ಯವಸ್ಥೆ ಮಾಡಿರುವ ಕ್ರಿಯಾಯೋಜನೆ ಪಟ್ಟಿಯಲ್ಲಿ ಇರುವಂತಹ ಆಸನವನ್ನು ಮಾಡದೇ ಚಿಕ್ಕ ಆಸನವನ್ನು ನಿರ್ಮಿಸಲಾಗಿದೆ. ಅಲ್ಲದೆ ಶೌಚಾಲಯ ಮುಂಭಾಗದಲ್ಲಿ ಮಣ್ಣಿನ ಮೇಲೆ ಇಂಟರ್‌ಲಾಕ್ ಟೈಲ್ಸ್‌ನ್ನು ಹಾಕುವ ಕಾಮಗಾರಿ ಪೂರ್ಣಗೊಳಿಸದೇ ಮಳೆ ನೀರಿನಿಂದ ಟೈಲ್ಸ್‌ಗಳು ಚೆಲ್ಲಾಪಿಲ್ಲಿಯಾರುವುದನ್ನು ಗಮನಿಸಿದ ಜನರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಬಸ್ ನಿಲ್ದಾಣದ ಉದ್ಘಾಟನೆಯನ್ನು ಮಾಡಲು ಸಚಿವರು ಬರುತ್ತಿದ್ದಾರೆಂಬ ಹಿನ್ನೆಲೆಯಲ್ಲಿ ಹಿಂದಿನ ದಿನದಂದು ಬಸ್ ನಿಲ್ದಾಣದ ಒಳಗಿರುವ ಮರಗಳ ಕೊಂಬೆಗಳನ್ನು ರಾತ್ರೋ ರಾತ್ರಿ ಕಡಿಯುವುದರ ಜೊತೆಗೆ ತರಾತುರಿಯಲ್ಲಿ ಬಸ್ ನಿಲ್ದಾಣ, ಶೌಚಾಲಯ ಮತ್ತು ಕಾಂಪೌಂಡ್‌ಗಳಿಗೆ ಬಣ್ಣ ಬಳಿಯಲಾಗಿತ್ತು. ಆದರೆ ಈಗ ಬಸ್ ನಿಲ್ದಾಣದ ಕಾಂಪೌಂಡ್‌ಗೆ ಬಳಿಯಲಾಗಿದ್ದ ಬಣ್ಣ ಮಳೆ ನೀರಿಗೆ ಕೊಚ್ಚಿ ಹೋಗುತ್ತಿದೆ ಎಂದು ದೂರಿದ್ದಾರೆ.
ಸಚಿವ ರಾಮಲಿಂಗರೆಡ್ಡಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದಾಗ, ಸ್ಥಳೀಯ ಜನರು ಬಸ್ ನಿಲ್ದಾಣದ ಮೇಲ್ಛಾವಣಿ ಯಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಆರೋಪ ಮಾಡಿದರು. ಚರ್ಚ್ ಹಾಲ್‌ನಲ್ಲಿ ಬಳಿಕ ನಡೆದ ಸಮಾರಂಭದಲ್ಲಿ ಕೂಡ ಗುತ್ತಿಗೆದಾರರಿಗೆ ಸನ್ಮಾನ ಮಾಡಲಾಗಿತ್ತು. ಈ ಬಗ್ಗೆ ಸಚಿವರು ಸನ್ಮಾನವನ್ನು ಬೇಡವೆಂದು ನಿರಾಕರಿಸಿದ್ದರೂ ಒತ್ತಾಯವಾಗಿ ಸನ್ಮಾನ ಕಾರ್ಯಕ್ರಮ ನಡೆಸಲಾಗಿತ್ತು. ಸಾಧನೆ ಮಾಡುವವರಿಗೆ ಸನ್ಮಾನ ಮಾಡುವುದರಲ್ಲಿ ಅರ್ಥವಿದೆ. ಆದರೆ ಕಳಪೆ ಕಾಮಗಾರಿ ಮಾಡಿದವರಿಗೆ ಸನ್ಮಾನ ಮಾಡಿರುವುದರಲ್ಲಿ ಅರ್ಥವೇ ಇಲ್ಲ ಎಂದು ಸಭೆಯಲ್ಲಿದ್ದ ಜನರು ಮಾತನಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿದ್ದವು.
ಇನ್ನಾದರೂ ಇಲಾಖೆ ಎಚ್ಚತ್ತು ಗುಣಮಟ್ಟದ ಬಣ್ಣವನ್ನು ಬಳಿದು ಬಸ್ ನಿಲ್ದಾಣದ ಅಂದವನ್ನು ಶಾಶ್ವತವಾಗಿ ರುವಂತೆ ಎಚ್ಚರವ ಹಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.